ಗೆಲ್ಲುವ ದಾರಿಗಳು ಇಲ್ಲಿವೆ-ಕೃತಿ ಬಿಡುಗಡೆ
ಸಂತ ಮೇರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ಭವಾನಿಶಂಕರ್‌ರವರ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಗೆಲ್ಲುವ ದಾರಿಗಳು ಇಲ್ಲಿವೆ ಎಂಬ ಕೃತಿಯನ್ನು ೨೮-೦೬-೨೦೧೧ರಂದು ಮೂಡುಬೆಳ್ಳೆಯ ಅಶ್ವಿನ್ ಲಾರೆನ್ಸ್ ಕರ್ನೇಲಿಯೋರವರು ದೃಶ್ಯ ಶ್ರಾವ್ಯ ಕೊಠಡಿಯಲ್ಲಿ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತ ಈ ಕೃತಿಯು ಮೌಲ್ಯಗಳ ಬಿಕ್ಕಟ್ಟಿನ ಗೊಂದಲದ ಸುಳಿಯಲ್ಲಿ ಸಿಲುಕಿರುವ ಯುವಜನರಿಗೆ ಮಾರ್ಗದರ್ಶಕವಾಗಿದೆ ಎಂದರು. ಕೃತಿಯ ಮೊದಲ ಭಾಗದಲ್ಲಿ ನಮ್ಮ ಆಲೋಚನೆಗಳನ್ನು ಉತ್ತಮಗೊಳಿಸಿಕೊಳ್ಳಬಹುದಾದ ರೀತಿ, ಸಮಸ್ಯಾತ್ಮಕವಾದ ಅಭ್ಯಾಸಗಳನ್ನು ನಿವಾರಿಸಿಕೊಳ್ಳಬಹುದಾದ ಕ್ರಮ, ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದಾದ ರೀತಿಯನ್ನು ಕುರಿತಂತೆ ಈ ಕೃತಿಯಲ್ಲಿ ಉತ್ತಮವಾದ ಮಾರ್ಗದರ್ಶನವಿದೆ. ಎರಡನೆಯ ಭಾಗದಲ್ಲಿ ಲೇಖಕರು ವ್ಯಕ್ತಿತ್ವ ವಿಕಸನದ ಸೂತ್ರಗಳಿಗೆ ಸಂಬಂಧಿಸಿದಂತೆ ತಮ್ಮದೇ ಬದುಕಿನ ರೋಚಕವಾದ ಉದಾಹರಣೆಗಳನ್ನು ನೀಡಿದ್ದಾರೆ. ಇಲ್ಲಿನ ಎಲ್ಲಾ ಪ್ರಸಂಗಗಳು ತಂತಾನೆ ಓದುಗರಿಗೆ ಮಾರ್ಗದರ್ಶಕವಾಗುತ್ತವೆ. ಕೃತಿಯ ಮೂರನೆಯ ಭಾಗದಲ್ಲಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುವುದು, ಉದ್ಯೋಗಕ್ಕೆ ಸಂಬಂಧಿಸಿದಂತೆ ಬರೆಯಬೇಕಾದ ಸೀವಿ, ಸಂದರ್ಶನವನ್ನು ಎದುರಿಸಬೇಕಾದ ರೀತಿ, ಉದ್ಯೋಗಕ್ಕೆ ಸಂಬಂಧಿಸಿದ ಪರೀಕ್ಷೆಗಳಿಗೆ ಮಾಡಬೇಕಾದ ತಯಾರಿ, ಇವುಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ಈ ಪುಸ್ತಕ ಯುವಜನರು ಓದಲೇಬೇಕಾದ ಅಪರೂಪದ ಗ್ರಂಥವೆಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಜಾನ್ ಕ್ಲಾರೆನ್ಸ್ ಮಿರಾಂಡರವರು ಅಧ್ಯಕ್ಷೀಯ ಮಾತುಗಳನ್ನಾಡಿದರು. ಕನ್ನಡ ಪ್ರಾಧ್ಯಾಪಕರಾದ ಎನ್. ಭವಾನಿಶಂಕರ್‌ರವರು ಪ್ರಸ್ತಾವನೆಗೈದರು. ಡಾ. ಪದ್ಮನಾಭ ಭಟ್‌ರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ ಗೋಪಾಲಕೃಷ್ಣ ಸಾಮಗರವರು ವಂದಿಸಿದರು. ಶ್ರೀಲತಾ ಕಾರ್ಯಕ್ರಮ ನಿರ್ವಹಿಸಿದರು.
No comments:
Post a Comment