Thursday, September 29, 2011

ನಿಮ್ಮನ್ನು ರಕ್ಷಿಸುವ ಕಾನೂನುಗಳು-ಕೃತಿ ಬಿಡುಗಡೆ


ಶಿರ್ವದ ಸಂತ ಮೇರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ಭವಾನಿಶಂಕರ್‌ರವರ ನಿಮ್ಮನ್ನು ರಕ್ಷಿಸುವ ಕಾನೂನುಗಳು  ಎಂಬ ಕೃತಿಯನ್ನು ಉಡುಪಿಯ ಖ್ಯಾತ ವಕೀಲರಾದ ಶ್ರೀ ಅಸೀದುಲ್ಲಾರವರು ಬಿಡುಗಡೆ ಮಾಡಿದರು.
            ಶ್ರೀ ಅಸೀದುಲ್ಲಾರವರು ಮಾತನಾಡುತ್ತ ಈ ಕೃತಿಯಲ್ಲಿ ವಾಹನ ಅಪಘಾತವಾದಾಗ ಏನು ಮಾಡಬೇಕು ಎಂಬುದನ್ನು ವಿವರವಾಗಿ ಬರೆದಿದ್ದಾರೆ. ಕನ್ನಡಕ್ಕೆ ಈ ಲೇಖನ ಹೊಸತು. ನಮ್ಮ ಸಾಮಾನ್ಯ ಪ್ರಜೆಗಳು ಮಾಹಿತಿ ಹಕ್ಕು ಕಾನೂನಿನ ಪ್ರಕಾರ ನಮ್ಮ ಸ್ವಂತ ಸಮಸ್ಯೆಗಳು ಅಥವಾ ಈ ದೇಶದ ಭದ್ರತೆಯನ್ನು ಬಿಟ್ಟು ಬೇರೆ ಯಾವುದೇ ವಿಷಯದ ಬಗ್ಗೆ ಹೇಗೆ ಅರ್ಜಿ ಸಲ್ಲಿಸಿ ೩೦ ದಿನಗಳಲ್ಲಿ ಮಾಹಿತಿಯನ್ನು ಪಡೆಯಬಹುದು, ಸರಕಾರಿ ಆಫೀಸುಗಳ ಒಳಗೆ ಹೋಗಿ ಮೂಲ ದಾಖಲೆಗಳನ್ನು ಪರಿಶೀಲಿಸಲು ಏನು ಮಾಡಬೇಕು, ಕೆಲಸ ಮಾಡಿಕೊಡದಿರುವ ಅಥವಾ ಲಂಚ ಕೇಳುವ ಅಧಿಕಾರಿಯ ವಿರುದ್ಧ, ಅಕ್ರಮ ಸಂಪತ್ತು ಗಳಿಸಿರುವವರ ವಿರುದ್ಧ ಲೋಕಾಯುಕ್ತಕ್ಕೆ ಹೇಗೆ ದೂರು ನೀಡಬಹುದು, ವರದಕ್ಷಿಣೆಯ ಕಿರುಕುಳದಿಂದ ರಕ್ಷಣೆ ಪಡೆಯುವುದು ಹೇಗೆ, ಪೋಲೀಸರ ಕಿರುಕುಳದಿಂದ ರಕ್ಷಣೆ ಪಡೆಯಲು ಇರುವ ಕಾನೂನುಗಳೇನು, ನಾಮಿನೇಶನ್, ವಿಲ್, ಪವರ್ ಆಫ್ ಅಟಾರ್ನಿ, ಸ್ತ್ರೀ ಶೋಷಣೆಯ ವಿರುದ್ಧ ಇರುವ ಕಾನೂನುಗಳು ಇತ್ಯಾದಿ ವಿಷಯಗಳನ್ನು ಪರಿಚಯಿಸಿದ್ದಾರೆ.     ಲೇಖಕರು ತನ್ನು ಬದುಕಿನ ಘಟನೆಗಳನ್ನು ಹೇಳುತ್ತ ಕಥನ ಶೈಲಿಯಲ್ಲಿ ಈ ಪುಸ್ತಕವನ್ನು ಬರೆದಿದ್ದು ೨೦೦ಕ್ಕೂ ಹೆಚ್ಚು  ಫೋಟೋಗಳ ಮೂಲಕ ಕೃತಿಯನ್ನು ಅಂದಗೊಳಿಸಿದ್ದಾರೆ. ಈ ಕೃತಿಯು ಒಂದು ಕತೆಯ ರೀತಿಯಲ್ಲಿ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ ಎಂದು ಶ್ರೀ ಅಸೀದುಲ್ಲಾರವರು ಹೇಳಿದರು.
            ಕಾಲೇಜಿನ ಪ್ರಾಂಶುಪಾಲರಾದ ಡಾ. ಜಾನ್ ಕ್ಲಾರೆನ್ಸ್ ಮಿರಾಂಡರವರು ಎನ್.ಭವಾನಿಶಂಕರ್‌ರವರ ಇಂಟರ್‌ನೆಟ್ ಕಲಿಯಿರಿ ಕೃತಿಯ ಒಂದೂವರೆ ವರ್ಷದಲ್ಲಿನ ೬ನೇ ಮುದ್ರಣವನ್ನು ಮತ್ತು ೩ ತಿಂಗಳಲ್ಲಿ ಮರು ಮುದ್ರಣಗೊಂಡ ಗೆಲ್ಲುವ ದಾರಿಗಳು ಇಲ್ಲಿವೆ ಕೃತಿಯನ್ನು ಬಿಡುಗಡೆ ಮಾಡುತ್ತ ಎನ್.ಭವಾನಿಶಂಕರ್‌ರವರ ಕೃತಿಗಳ ವಾಪ್ತಿ ಕವನ, ನಾಟಕ, ಕಂಪ್ಯೂಟರ್, ಇಂಟರ್‌ನೆಟ್, ವ್ಯಕ್ತಿತ್ವ ವಿಕಸನ, ಕಾರ್ ಡ್ರೈವಿಂಗ್‌ಗಳನ್ನು ದಾಟಿ ಇದೀಗ ಕಾನೂನಿನ ಪರಿಧಿಗೆ ಬಂದು ನಿಂತಿದೆ. ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ಕೃತಿಗಳನ್ನೇ ಬರೆಯುತ್ತಿರುವುದಕ್ಕಾಗಿ ಲೇಖಕರನ್ನು ಅಭಿನಂದಿಸಿದರು.          
            ಡಾ. ಪದ್ಮನಾಭ ಭಟ್‌ರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ ಗೋಪಾಲಕೃಷ್ಣ ಸಾಮಗರವರು ವಂದಿಸಿದರು. ಅಶ್ವಿನ್ ಲಾರೆನ್ಸ್ ಕರ್ನೇಲಿಯೋ ಕಾರ್ಯಕ್ರಮ ನಿರ್ವಹಿಸಿದರು.
ಒಬಾಮ-ಅಮೆರಿಕವನ್ನು ಬದಲಿಸಬಲ್ಲೆಯ

ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಮುಜಾಫರ್ ಅಸ್ಸಾದಿಯವರು ತಾವು ಅಮೆರಿಕಕ್ಕೆ ಭೇಟಿ ನೀಡಿದಾಗ ಅಲ್ಲಿ ಕಂಡು ಬಂದ ಕರಿಯ ನೀಗ್ರ್ರೋಗಳನ್ನು ಕುರಿತಂತಹ ತಾರತಮ್ಯವನ್ನು ಎಳೆ ಎಳೆಯಾಗಿ ವಣರ್ಿಸಿದರು. ಅಮೆರಿಕದ ಬಂಡವಾಳಶಾಹಿ ಆರಂಭಗೊಂಡಿದ್ದೇ ಕರಿಯರ ಬೆವರಿನಿಂದ ಎಂದು ಹೇಳುತ್ತ, ಆ ಜನಾಂಗದಲ್ಲಿ ಹುಟ್ಟಿ ಬಂದ ಒಬಾಮ ಅವರ ಪರಿಸ್ಥಿತಿಯನ್ನು ಬದಲಿಸಬಲ್ಲರೆ ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಅಮೆರಿಕದ ಬಿಳಿಯರು ಅಮೆರಿಕದ ಮೂಲನಿವಾಸಿಗಳನ್ನು ಯುದ್ಧ ಮಾಡದೆಯೆ ನಾಶ ಮಾಡಿದ ರೀತಿ, ಕಪ್ಪು ನೀಗ್ರೋಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಟೀಕಿಸಿದರು. ಅಮೆರಿಕವನ್ನು ಬದಲಾಯಿಸುವುದು ಒಬಾಮರವರಿಗೆ ಸಾಧ್ಯವಾಗಿಲ್ಲ ಎಂದು ಹೇಳಿದರು.   
ಪ್ರಪಂಚದ ಶ್ರೀಮಂತ ದೇಶಗಳಲ್ಲಿನ ಶೋಷಣೆಯನ್ನು ವಿಶ್ಲೇಷಿಸಿದರು. ಚೀನಾದ ಬೀಜಿಂಗ್ನಲ್ಲಿ ಎಲ್ಲವೂ ಶ್ರೀಮಂತ. ಬೀಜಿಂಗ್ನ ಹೊರಗೆ ಹೋದರೆ ಕಡು ಬಡತನವಿದೆ. ಇದರ ಜೊತೆಗೆ ತಾವು ಭೇಟಿ ನೀಡಿದ ನೆದರ್ಲ್ಯಾಂಡ್, ಇರಾನ್, ಮಲೇಶಿಯ, ಬಾಂಗ್ಲಾ, ಇಂಗ್ಲೆಂಡ್, ಥೈಲ್ಯಾಂಡ್, ಮಲೇಶಿಯ, ಮೊಜಾಂಬಿಕ್, ಕೆನ್ಯಾ, ದಕ್ಷಿಣ ಆಫ್ರಿಕಾ, ಮಧ್ಯ ಪ್ರಾಚ್ಯ ಇತ್ಯಾದಿ ದೇಶಗಳ ಸಾಮಾಜಿಕ ಸ್ಥಿತಿ ಗತಿಗಳನ್ನು ಹೋಲಿಸಿ ವಿಶ್ಲೇಷಿಸಿದರು.    
ಪ್ರೊ. ಗೋಪಾಲಕೃಷ್ಣ ಸಾಮಗರವರು ಸ್ವಾಗತಿಸಿದರು. ಎನ್.ಭವಾನಿಶಂಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಎಸ್ ಪದ್ಮನಾಭ ಭಟ್ರವರು ವಂದಿಸಿದರು. ಪ್ರಾಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಶುಭ ಕೋರಿದರು.      
ದಿಕ್ಕು ತಪ್ಪಿದ ಪದವಿ ಶಿಕ್ಷಣ-ಶಿರ್ವದಲ್ಲಿ ವಿಚಾರಗೋಷ್ಠಿ

ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ಪದವಿ ಶಿಕ್ಷಣದ ಸ್ವರೂಪ ಮತ್ತು ಸುಧಾರಣೆಯ ಸಾಧ್ಯತೆಗಳನ್ನು ಕುರಿತಂತೆ ವಿಚಾರಗೋಷ್ಠಿ ನಡೆಯಿತು. ಕಾರ್ಯಕ್ರಮದ ಸಂಚಾಲಕರಾದ ಡಾ. ಪದ್ಮನಾಭ ಭಟ್‌ರವರು ಮಾತನಾಡುತ್ತ ಭಾರತ ದೇಶದಲ್ಲಿ ಶಿಕ್ಷಣವು ನಡೆದು ಬಂದ ದಾರಿಯ ಅವಲೋಕನ ಮಾಡಿದರು. ಇಂದಿನ ಸೆಮಿಸ್ಟರ್ ಸಿಸ್ಟಂನಲ್ಲಿ ವಿದ್ಯಾರ್ಥಿಗಳು ಬಾಯಿ ಪಾಠ ಹೊಡೆಯುವ ಯಂತ್ರಗಳಾಗಿ ಬಿಟ್ಟಿದ್ದಾರೆ. ನಾಲ್ಕು ತಿಂಗಳಲ್ಲಿ ವಿದ್ಯಾರ್ಥಿಗಳು ಮೂರು ಪರೀಕ್ಷೆ ಬರೆಯಬೇಕು. ಪ್ರಾಧ್ಯಾಪಕರು ನ್ಯಾಕ್ ಸಮಿತಿಗೆ ತೋರಿಸಲೆಂದು ದಾಖಲೆಗಳನ್ನು ಬರೆಯುವ ಗುಮಾಸ್ತರಾಗುತ್ತಿದ್ದಾರೆ ಎಂದರು.
            ಲೇಖಕರಾದ ಎನ್.ಭವಾನಿಶಂಕರ್‌ರವರು ಮಾತನಾಡುತ್ತ ಹಿಂದಿನ ವಾರ್ಷಿಕ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳು ನಾನಾ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಅಲ್ಲಿ ಅವರ ಸೃಜನಶೀಲತೆಗೆ ಅವಕಾಶವಿತ್ತು. ಆದರೆ ಇಂದಿನ ಜಾಗತೀಕರಣ ಮತ್ತು ವಾಣಿಜ್ಯೀಕರಣ ವಿದ್ಯಾರ್ಥಿಗಳನ್ನು ಹಣ ಗಳಿಸುವ ಯಂತ್ರಗಳನ್ನಾಗಿಸುತ್ತಿದೆ. ಯಾವ ಕೋರ್ಸ್ ಹೆಚ್ಚು ಸಂಬಳದ ಉದ್ಯೋಗ ಕೊಡುತ್ತದೋ ಅದಕ್ಕೆ ಹೆಚ್ಚು ಬೇಡಿಕೆ. ಅದಕ್ಕೆ ಹೆಚ್ಚು ಡೊನೇಶನ್. ಶಿಕ್ಷಣ ಕ್ಷೇತ್ರವೆ ವ್ಯಾಪಾರೀಕರಣಕ್ಕೊಳಗಾದರೆ ದೇಶದ ಭವಿಷ್ಯವೇನು ಎಂದು ಕೇಳಿದರು.
            ಪ್ರೊ. ಸುಬ್ರಹ್ಮಣ್ರವರು ಮಾತನಾಡುತ್ತ ಇಂದಿನ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳಿಗೆ ಓದಿದ್ದನ್ನು ಜೀರ್ಣ ಮಾಡಿಕೊಳ್ಳಲು ಅವಕಾಶ ಕೊಡುತ್ತಿಲ್ಲ. ಪರೀಕ್ಷೆ ಮುಗಿದ ಮೇಲೆ ನೀನು ಹಿಂದಿನ ಸೆಮಿಸ್ಟರ್‌ನಲ್ಲಿ ಓದಿದ್ದೇನು ಎಂದು ಕೇಳಿದರೆ ಅವನಿಗೆ ಏನೂ ನೆನಪಿರುವುದಿಲ್ಲ. ಕಾಲೇಜು ಶಿಕ್ಷಣದಲ್ಲಿ ಬಾಯಿ ಪಾಠ ಹೊಡೆದು ಬರೆಯುವ ಪರೀಕ್ಷೆಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡಿ ವಿದ್ಯಾರ್ಥಿಯ ನಿಜವಾದ ಜ್ಞಾನದ ಪರೀಕ್ಷಗೆ ಅವಕಾಶ ಮಾಡಿಕೊಡಬೇಕು ಎಂದರು.
            ಪ್ರೊ. ವಿನ್ಸೆಂಟ್‌ರವರು ಮಾತನಾಡುತ್ತ ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಆ ದಾರಿಯಲ್ಲಿ ನಡೆಯಬೇಕು. ಮೊಲ ಓಡುವುದರಲ್ಲಿ ಸಾಧನೆ ಮಾಡಬೇಕು, ಅಳಿಲು ಮರ ಹತ್ತುವುದರಲ್ಲಿ ಸಾಧನೆ ಮಾಡಬೇಕು. ಇದು ಉಲ್ಟಾ ಆಗಬಾರದು ಎಂದರು. ಪ್ರೊ. ಸರಿತಾ ಆಳ್ವರವರು ಇಂದು ಶೈಕ್ಷಣಿಕ ಸಾಧನಗಳ ಸಂಖ್ಯೆ ಹೆಚ್ಚಾಗಿದೆ. ವಿದ್ಯೆ ಕಲಿಸುವುದಕ್ಕಾಗಿ ನಾನಾ ರೀತಿಯ ತಂತ್ರಜ್ಞಾನ ಬಂದಿದೆ. ಕಂಪ್ಯೂಟರ್, ಪ್ರ್ರೊಜೆಕ್ಟರ್, ಪವರ್ ಪಾಯಿಂಟ್, ಟಚ್ ಬೋರ್ಡ್, ಎಸಿ ರೂಂ ಎಲ್ಲಾ ಇದೆ. ಆದರೆ ಇವುಗಳ ನಡುವೆ ಜ್ಞಾನ ಕಾಣೆಯಾಗುತ್ತಿರುವುದು ವಿಷಾದನೀಯ ಎಂದರು.       

Thursday, September 22, 2011

ಮಹಿಳೆ ವೈಯಕ್ತಿಕವಾಗಿ ಬೆಳೆಯಬೇಕು


ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯವನ್ನು ಕುರಿತಂತೆ ವಿಚಾರಗೋಷ್ಠಿ ನಡೆಯಿತು. ದೇಶದಲ್ಲಿ ಮಹಿಳಾ ದೌರ್ಜನ್ಯವು ಹೆಚ್ಚುತ್ತಿರುವುದರಿಂದ ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

ಸಂತ ಮೇರಿ ಸ್ನಾತಕೋತ್ತರ ವಿಭಾಗದ ಪ್ರೊ. ಶೋಭಾ ಡಿಸೋಜರವರು ಮಹಿಳಾ ದೌರ್ಜನ್ಯದ ಚಾರಿತ್ರಿಕ ಸ್ವರೂಪವನ್ನು ಮಹಿಳೆಯ ದೈಹಿಕ ಪರಿಸ್ಥಿತಿ, ಆ ಕಾಲದ ಅರಿವಿನ ಕೊರತೆ ಮತ್ತು ಸಾಮಾಜಿಕ ಆರ್ಥಿಕ ಸ್ವರೂಪದ ಹಿನ್ನೆಲೆಯ ನೆಲೆಯಲ್ಲಿ ವಿಶ್ಲೇಷಿಸಿದರು. ಅನಂತರ ಮಾತನಾಡಿದ ಪ್ರೊ. ಜಸಿಂಥಾ ಫೆರ್ನಾಂಡಿಸ್‌ರವರು ವಿಜ್ಞಾನದ ಕ್ಷೇತ್ರದಲ್ಲಿ ಬದಲಾವಣೆಯಾದಂತೆ, ಕೈಗಾರಿಕೀಕರಣ ಮತ್ತು ಆಧುನಿಕತೆಯು ಸ್ತ್ರೀಯರ ಬದುಕಿನಲ್ಲಿ ಉಂಟು ಮಾಡಿದ ಬದಲಾವಣೆಯು ಅತ್ಯಂತ ಮಹತ್ವದ್ದೆಂದು ಹೇಳಿದರು.

ಫ್ರೀಡಾ ಡಿಸೋಜರವರು ಪಶ್ಚಿಮದ ಸಂಸ್ಕೃತಿ ಮತ್ತು ಜಾಗತೀಕರಣವು ನಮ್ಮ ಸಮಾಜದಲ್ಲಿ ಹುಟ್ಟಿಸಿರುವ ಅಲ್ಲೋಲ ಕಲ್ಲೋಲದ ಸ್ವರೂಪವನ್ನು ಪರಿಚಯಿಸಿದರೆ ಯಶೋದರವರು ನಗರ ಮತ್ತು ಗ್ರಾಮೀಣ ಸಂದರ್ಭದಲ್ಲಿ ದೌರ್ಜನ್ಯದ ಹಿಂದಿರುವ ಕಾರಣಗಳನ್ನು ಮತ್ತು ಅದರ ಸ್ವರೂಪವನ್ನು ವಿಶ್ಲೇಷಿಸಿದರು. ಪ್ರೊ. ವಿನ್ಸೆಂಟ್ ಡಿಸೋಜರವರು ಮಹಿಳಾ ದೌರ್ಜನ್ಯವನ್ನು ನಿವಾರಿಸುವುದಕ್ಕೆ ಸಂಬಂಧಿಸಿದಂತೆ ಆಗಬೇಕಾದ ಕೆಲಸಗಳು ಮತ್ತು ಇದರಲ್ಲಿ ಪುರುಷರ ಪಾತ್ರ ಏನಿರಬೇಕೆಂಬುದನ್ನು ವಿವರಿಸಿದರು.

ಗೋಷ್ಠಿಯ ಸಂಚಾಲಕರಾದ ಎನ್.ಭವಾನಿಶಂಕರ್‌ರವರು ಮಹಿಳೆಯರ ಸಬಲೀಕರಣ ಆಗಬೇಕಾದರೆ ಅವರಿಗೆ ದೊರಕಬೇಕಾದ ಶಿಕ್ಷಣ ಮತ್ತು ಸ್ತ್ರೀ ಶೋಷಣೆಯ ಸ್ವರೂಪದ ಅರಿವು ಬಹಳ ಮುಖ್ಯವಾದುದೆಂದು ಹೇಳುತ್ತಾ ಪ್ರತಿಯೊಬ್ಬ ಸ್ತ್ರೀ ತನ್ನ ಸಮಸ್ಯೆಯನ್ನು ಕುರಿತಂತೆ ತಾನೇ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆಯೆಂದು ಹೇಳಿದರು. ಇದರ ಜೊತೆಗೆ ಸ್ತ್ರೀಯರು ಒಂದು ಸಮೂಹವಾಗಿ ತಮ್ಮ ಮೇಲೆ ಆಗುವ ದೌರ್ಜನ್ಯದ ವಿರುದ್ಧ ಹೋರಾಡಬೇಕಾದ ಅಗತ್ಯವಿದೆಯಾದರೂ ಸ್ತ್ರೀಯರ ಮೇಲಿನ ದೌರ್ಜನ್ಯವನ್ನು ಕೇವಲ ಸ್ರ್ರೀಯರ ಸಮಸ್ಯೆಯಾಗಿ ನೋಡದೆ ನಮ್ಮ ಸಮಾಜದ ಒಂದು ಕಪ್ಪು ಚುಕ್ಕೆ ಎಂದು ತಿಳಿದು ಅದನ್ನು ಸರಿಪಡಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.

ಜೆನಿಫರ್‌ವಾಜ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಲೋಯಲ್ ಕೊರೆಯ ವಂದಿಸಿದರು.


ಕಾರ್ ಡ್ರೈವಿಂಗ್ ಕುರಿತ ಕನ್ನಡದ ಮೊದಲ ಕೃತಿ
ಕಾರ್ ಡ್ರೈವಿಂಗ್ ಮತ್ತು ನಿರ್ವಹಣೆ-ಕೃತಿ ಬಿಡುಗಡೆ

ಸಂತ ಮೇರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ಭವಾನಿಶಂಕರ್‌ರವರ ಕಾರ್ ಡ್ರೈವಿಂಗ್ ಮತ್ತು ನಿರ್ವಹಣೆ ಎಂಬ ಕೃತಿಯನ್ನು ಬಜ್ಪೆಯ ನಿರಂಜನ ಸ್ವಾಮಿ ಪಾಲಿಟೆಕ್ನಕ್‌ನ ಮೆಕಾನಿಕಲ್ ವಿಭಾಗದ ಪ್ರಾಧ್ಯಾಪಕರಾದ ಎಂ. ದಿವಾಕರ ಶೆಟ್ಟಿಯವರು ಬಿಡುಗಡೆ ಮಾಡಿದರು.
ಈ ವಿಷಯವನ್ನು ಕುರಿತಂತೆ ಕನ್ನಡದಲ್ಲಿ ಬಂದ ಮೊದಲ ಕೃತಿ ಇದಾಗಿದೆ. ಈ ಕೃತಿಯಲ್ಲಿ ಕಾರ್ ಡ್ರೈವಿಂಗನ್ನು ಕಲಿಯಬೇಕಾದ ರೀತಿ, ಕಾರಿನ ಯಂತ್ರಗಳ ಎಲ್ಲಾ ಬಿಡಿ ಭಾಗಗಳು, ಅವುಗಳು ಕೆಲಸ ಮಾಡುವ ರೀತಿ, ಕಾರ್ ಹಾಳಾಗದಂತೆ ಗಮನಿಸುತ್ತಿರಬೇಕಾದ ಕಾರಿನ ಭಾಗಗಳು, ಟ್ರಾಫಿಕ್ ಸಿಗ್ನಲ್‌ಗಳ ವಿವರಣೆ, ಡ್ರೈವಿಂಗ್ ಪರೀಕ್ಷೆಗೆ ಮಾಡಬೇಕಾದ ತಯಾರಿ ಮತ್ತು ಅಪಘಾತವನ್ನು ತಡೆಯಬಹುದಾದ ರೀತಿ-ಇವುಗಳನ್ನು ಅತ್ಯಂತ ಸರಳವಾದ ಭಾಷೆಯಲ್ಲಿ ಬರೆಯಲಾಗಿದೆ. ಇವುಗಳನ್ನು ವಿವರಿಸಲು ಲೇಖಕರು ೩೦೦ಕ್ಕೂ ಹೆಚ್ಚು ಚಿತ್ರಗಳನ್ನು ನೀಡಿದ್ದಾರೆ. ಇದು ಅತ್ಯಮೂಲ್ಯವಾದ ಪುಸ್ತಕ ಎಂದು ಎಂ. ದಿವಾಕರ ಶೆಟ್ಟಿಯವರು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿಯಾದ ಲಕ್ಷ್ಮೀ ವೆಂಕಟೇಶ್ ಡ್ರೈವಿಂಗ್ ಸ್ಕೂಲ್‌ನ ಕೆ. ವೆಂಕಟೇಶ್ ಭಟ್‌ರವರು ಮಾತನಾಡಿ ವಿಜ್ಞಾನದಲ್ಲಿ ಮೊದಲು ಥಿಯರಿ ಕಲಿಯುವುದು ಅನಂತರ ಪ್ರಾಕ್ಟಿಕಲ್ಸ್ ಎಂಬುದು ವಿಧಾನ. ಆದರೆ ಕಾರು ಕಲಿಯುವವನು ಡ್ರೈವಿಂಗ್ ಸೀಟಿನಲ್ಲಿ ಕುಳಿತು ಕಾರು ಬಿಡಲು ಆರಂಭಿಸುತ್ತಾನೆ. ಅದನ್ನು ಕುರಿತಂತೆ ಅವನಲ್ಲಿ ಯಾವುದೇ ಥಿಯರಿ ಜ್ಞಾನ ಇರುವುದಿಲ್ಲ. ಕನ್ನಡದ ಈ ಮೊದಲ ಪುಸ್ತಕ ಈ ಎಲ್ಲ ಕೊರತೆಗಳನ್ನು ಸಮಗ್ರವಾಗಿ ತುಂಬಿಕೊಟ್ಟಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎನ್.ಭವಾನಿಶಂಕರ್‌ರವರ ಅನೇಕ ಹೊಸ ವಿಷಯಗಳನ್ನು ಸೇರಿಸಿದ ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ ಎಂಬ ಕೃತಿಯ ಮೂರನೆಯ ಮುದ್ರಣವನ್ನು ಪ್ರಾಂಶುಪಾಲರಾದ ಡಾ. ಜಾನ್ ಕ್ಲಾರೆನ್ಸ್ ಮಿರಾಂಡರವರು, ಅನೇಕ ಹೊಸ ವಿಷಯಗಳನ್ನು ಸೇರಿಸಿದ ಇಂಟರ್‌ನೆಟ್ ಕಲಿಯಿರಿ ಎಂಬ ಕೃತಿಯ ಐದನೆಯ ಮುದ್ರಣವನ್ನು ಕೆ. ವೆಂಕಟೇಶ್ ಭಟ್‌ರವರು ಬಿಡುಗಡೆ ಮಾಡಿದರು. ಕೇವಲ ಹತ್ತು ತಿಂಗಳ ಅವಧಿಯಲ್ಲಿ ಈ ಕೃತಿಗಳು ಮರು ಮುದ್ರಣಗೊಳ್ಳುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾ ಎನ್.ಭವಾನಿಶಂಕರ್‌ರವರ ವಿಜ್ಞಾನ ಸಾಹಿತ್ಯವನ್ನು ಕನ್ನಡಕ್ಕೆ ಒಗ್ಗಿಸುವ ಪ್ರಯತ್ನವನ್ನು ಶ್ಲಾಘಿಸಿದರು.

ಡಾ. ಪದ್ಮನಾಭ ಭಟ್‌ರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ ಗೋಪಾಲಕೃಷ್ಣ ಸಾಮಗರವರು ವಂದಿಸಿದರು. ಅಶ್ವಿನ್ ಲಾರೆನ್ಸ್ ಕರ್ನೇಲಿಯೋ ಕಾರ್ಯಕ್ರಮ ನಿರ್ವಹಿಸಿದರು.

Saturday, September 17, 2011

ಅಣ್ಣಾ ಹಜಾರೆಯವರ ಹೋರಾಟ-ವಿಚಾರ ಸಂಕಿರಣ
ಅಣ್ಣಾ ಹಜಾರೆಯವರ ಹೋರಾಟವನ್ನು ಕುರಿತಂತೆ ಸಂತ ಮೇರಿ ಕಾಲೇಜಿನ ವಿದ್ಯಾರ್ಥಿ ಸಂಘ ಮತ್ತು ಕನ್ನಡ ವಿಭಾಗದ ವತಿಯಿಂದ ತಾ. ೨೬-೦೮-೨೦೧೧ರಂದು ವಿಚಾರ ಸಂಕಿರಣ ನಡೆಯಿತು. ಈ ವಿಚಾರ ಸಂಕಿರಣದ ಸಂಯೋಜಕರಾದ ಎನ್.ಭವಾನಿಶಂಕರ್‌ರವರು ಪ್ರಸಕ್ತ ಚಳುವಳಿಯು ನಿಷ್ಕಲಂಕ ವ್ಯಕ್ತಿತ್ವದ ಅಣ್ಣಾ ಹಜಾರೆಯವರು ಈ ಹೋರಾಟದ ಆಶಾ ಬಿಂದುವಾಗಿರುವುದು ಮತ್ತು ಭಾರತೀಯ ಜನ ಸಮುದಾಯದಲ್ಲಿ ಭ್ರಷ್ಟಾಚಾರದ ಬಗ್ಗೆ ತುಂಬಿಕೊಂಡ ಆಕ್ರೋಶವನ್ನು ಆಧರಿಸಿದೆ ಎಂದರು. ಡಾ. ಪದ್ಮನಾಭ ಭಟ್‌ರವರು ಲೋಕಪಾಲ ಮಸೂದೆಯು ರಾಜಕಾರಣಿಗಳ ನಿರಾಸಕ್ತಿಯಿಂದಾಗಿ ಚಾರಿತ್ರಿಕವಾಗಿ ತಿರಸ್ಕಾರಗೊಳ್ಳತ್ತಾ ಬಂದ ರೀತಿಯನ್ನು ಹೇಳಿದರೆ, ಪ್ರೊ. ಸುಬ್ರಹ್ಮಣ್ಯರವರು ಗಾಂಧಿ, ಜೆಪಿ ಮತ್ತು ಅಣ್ಣಾ ಹಜಾರೆಯವರ ಚಳವಳಿಯ ಅವಲೋಕನಗೈದರು. ಪ್ರೊ. ವಿನ್ಸೆಂಟ್ ಡಿಸೋಜರು ಪ್ರಸ್ತುತ ಕಾಲಸಂದರ್ಭದಲ್ಲಿನ ಭ್ರಷಾಚಾರದ ಅಗಾಧತೆಯನ್ನು ಪರಿಚಯಿಸುತ್ತ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ತಮ್ಮ ಕೆಲಸವನ್ನು ನಿರ್ವಹಿಸುತ್ತಲೆ ಈ ಚಳವಳಿಯನ್ನು ಬೆಳೆಸಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದರು. ಪ್ರೊ. ಸರಿತಾ ಡಿಸೋಜರವರು ರಾಜಕಾರಣದ ಅವಸ್ಥೆಗಿಂತ ಪ್ರಜೆಗಳ ಹೊಣೆಗಾರಿಕೆ, ಭ್ರಷ್ಟಾಚಾರವನ್ನು ಪ್ರಶ್ನಿಸುವ ಮನೋಧರ್ಮ ಮತ್ತು ಪ್ರಾಮಾಣಿಕತೆ ಬಹಳ ಮುಖ್ಯವಾದುದೆಂದು ಹೇಳಿದರು. ಗಾಂಧಿ ಟೋಪಿ ಧರಿಸಿದ ವಿದ್ಯಾರ್ಥಿಗಳ ಕುತೂಹಲಕರವಾದ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿದರು. ಪ್ರಾಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತೋರ್ಪಡಿಸಿದ ಸಾಮಾಜಿಕ ಜವಾಬ್ದಾರಿಯನ್ನು ಪ್ರಶಂಸಿಸಿದರು. ದ್ವಿತೀಯ ಬಿ‌ಎ ವಿದ್ಯಾರ್ಥಿಯಾದ ಅಶ್ವಿನ್ ಲಾರೆನ್ಸ್ ಕರ್ನೇಲಿಯೋರವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ಗೆಲ್ಲುವ ದಾರಿಗಳು ಇಲ್ಲಿವೆ-ಕೃತಿ ಬಿಡುಗಡೆ

ಸಂತ ಮೇರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ಭವಾನಿಶಂಕರ್‌ರವರ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಗೆಲ್ಲುವ ದಾರಿಗಳು ಇಲ್ಲಿವೆ ಎಂಬ ಕೃತಿಯನ್ನು ೨೮-೦೬-೨೦೧೧ರಂದು ಮೂಡುಬೆಳ್ಳೆಯ ಅಶ್ವಿನ್ ಲಾರೆನ್ಸ್ ಕರ್ನೇಲಿಯೋರವರು ದೃಶ್ಯ ಶ್ರಾವ್ಯ ಕೊಠಡಿಯಲ್ಲಿ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತ ಈ ಕೃತಿಯು ಮೌಲ್ಯಗಳ ಬಿಕ್ಕಟ್ಟಿನ ಗೊಂದಲದ ಸುಳಿಯಲ್ಲಿ ಸಿಲುಕಿರುವ ಯುವಜನರಿಗೆ ಮಾರ್ಗದರ್ಶಕವಾಗಿದೆ ಎಂದರು. ಕೃತಿಯ ಮೊದಲ ಭಾಗದಲ್ಲಿ ನಮ್ಮ ಆಲೋಚನೆಗಳನ್ನು ಉತ್ತಮಗೊಳಿಸಿಕೊಳ್ಳಬಹುದಾದ ರೀತಿ, ಸಮಸ್ಯಾತ್ಮಕವಾದ ಅಭ್ಯಾಸಗಳನ್ನು ನಿವಾರಿಸಿಕೊಳ್ಳಬಹುದಾದ ಕ್ರಮ, ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದಾದ ರೀತಿಯನ್ನು ಕುರಿತಂತೆ ಈ ಕೃತಿಯಲ್ಲಿ ಉತ್ತಮವಾದ ಮಾರ್ಗದರ್ಶನವಿದೆ. ಎರಡನೆಯ ಭಾಗದಲ್ಲಿ ಲೇಖಕರು ವ್ಯಕ್ತಿತ್ವ ವಿಕಸನದ ಸೂತ್ರಗಳಿಗೆ ಸಂಬಂಧಿಸಿದಂತೆ ತಮ್ಮದೇ ಬದುಕಿನ ರೋಚಕವಾದ ಉದಾಹರಣೆಗಳನ್ನು ನೀಡಿದ್ದಾರೆ. ಇಲ್ಲಿನ ಎಲ್ಲಾ ಪ್ರಸಂಗಗಳು ತಂತಾನೆ ಓದುಗರಿಗೆ ಮಾರ್ಗದರ್ಶಕವಾಗುತ್ತವೆ. ಕೃತಿಯ ಮೂರನೆಯ ಭಾಗದಲ್ಲಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುವುದು, ಉದ್ಯೋಗಕ್ಕೆ ಸಂಬಂಧಿಸಿದಂತೆ ಬರೆಯಬೇಕಾದ ಸೀವಿ, ಸಂದರ್ಶನವನ್ನು ಎದುರಿಸಬೇಕಾದ ರೀತಿ, ಉದ್ಯೋಗಕ್ಕೆ ಸಂಬಂಧಿಸಿದ ಪರೀಕ್ಷೆಗಳಿಗೆ ಮಾಡಬೇಕಾದ ತಯಾರಿ, ಇವುಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ಈ ಪುಸ್ತಕ ಯುವಜನರು ಓದಲೇಬೇಕಾದ ಅಪರೂಪದ ಗ್ರಂಥವೆಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಜಾನ್ ಕ್ಲಾರೆನ್ಸ್ ಮಿರಾಂಡರವರು ಅಧ್ಯಕ್ಷೀಯ ಮಾತುಗಳನ್ನಾಡಿದರು. ಕನ್ನಡ ಪ್ರಾಧ್ಯಾಪಕರಾದ ಎನ್. ಭವಾನಿಶಂಕರ್‌ರವರು ಪ್ರಸ್ತಾವನೆಗೈದರು. ಡಾ. ಪದ್ಮನಾಭ ಭಟ್‌ರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ ಗೋಪಾಲಕೃಷ್ಣ ಸಾಮಗರವರು ವಂದಿಸಿದರು. ಶ್ರೀಲತಾ ಕಾರ್ಯಕ್ರಮ ನಿರ್ವಹಿಸಿದರು.