Thursday, September 29, 2011

ನಿಮ್ಮನ್ನು ರಕ್ಷಿಸುವ ಕಾನೂನುಗಳು-ಕೃತಿ ಬಿಡುಗಡೆ


ಶಿರ್ವದ ಸಂತ ಮೇರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ಭವಾನಿಶಂಕರ್‌ರವರ ನಿಮ್ಮನ್ನು ರಕ್ಷಿಸುವ ಕಾನೂನುಗಳು  ಎಂಬ ಕೃತಿಯನ್ನು ಉಡುಪಿಯ ಖ್ಯಾತ ವಕೀಲರಾದ ಶ್ರೀ ಅಸೀದುಲ್ಲಾರವರು ಬಿಡುಗಡೆ ಮಾಡಿದರು.
            ಶ್ರೀ ಅಸೀದುಲ್ಲಾರವರು ಮಾತನಾಡುತ್ತ ಈ ಕೃತಿಯಲ್ಲಿ ವಾಹನ ಅಪಘಾತವಾದಾಗ ಏನು ಮಾಡಬೇಕು ಎಂಬುದನ್ನು ವಿವರವಾಗಿ ಬರೆದಿದ್ದಾರೆ. ಕನ್ನಡಕ್ಕೆ ಈ ಲೇಖನ ಹೊಸತು. ನಮ್ಮ ಸಾಮಾನ್ಯ ಪ್ರಜೆಗಳು ಮಾಹಿತಿ ಹಕ್ಕು ಕಾನೂನಿನ ಪ್ರಕಾರ ನಮ್ಮ ಸ್ವಂತ ಸಮಸ್ಯೆಗಳು ಅಥವಾ ಈ ದೇಶದ ಭದ್ರತೆಯನ್ನು ಬಿಟ್ಟು ಬೇರೆ ಯಾವುದೇ ವಿಷಯದ ಬಗ್ಗೆ ಹೇಗೆ ಅರ್ಜಿ ಸಲ್ಲಿಸಿ ೩೦ ದಿನಗಳಲ್ಲಿ ಮಾಹಿತಿಯನ್ನು ಪಡೆಯಬಹುದು, ಸರಕಾರಿ ಆಫೀಸುಗಳ ಒಳಗೆ ಹೋಗಿ ಮೂಲ ದಾಖಲೆಗಳನ್ನು ಪರಿಶೀಲಿಸಲು ಏನು ಮಾಡಬೇಕು, ಕೆಲಸ ಮಾಡಿಕೊಡದಿರುವ ಅಥವಾ ಲಂಚ ಕೇಳುವ ಅಧಿಕಾರಿಯ ವಿರುದ್ಧ, ಅಕ್ರಮ ಸಂಪತ್ತು ಗಳಿಸಿರುವವರ ವಿರುದ್ಧ ಲೋಕಾಯುಕ್ತಕ್ಕೆ ಹೇಗೆ ದೂರು ನೀಡಬಹುದು, ವರದಕ್ಷಿಣೆಯ ಕಿರುಕುಳದಿಂದ ರಕ್ಷಣೆ ಪಡೆಯುವುದು ಹೇಗೆ, ಪೋಲೀಸರ ಕಿರುಕುಳದಿಂದ ರಕ್ಷಣೆ ಪಡೆಯಲು ಇರುವ ಕಾನೂನುಗಳೇನು, ನಾಮಿನೇಶನ್, ವಿಲ್, ಪವರ್ ಆಫ್ ಅಟಾರ್ನಿ, ಸ್ತ್ರೀ ಶೋಷಣೆಯ ವಿರುದ್ಧ ಇರುವ ಕಾನೂನುಗಳು ಇತ್ಯಾದಿ ವಿಷಯಗಳನ್ನು ಪರಿಚಯಿಸಿದ್ದಾರೆ.     ಲೇಖಕರು ತನ್ನು ಬದುಕಿನ ಘಟನೆಗಳನ್ನು ಹೇಳುತ್ತ ಕಥನ ಶೈಲಿಯಲ್ಲಿ ಈ ಪುಸ್ತಕವನ್ನು ಬರೆದಿದ್ದು ೨೦೦ಕ್ಕೂ ಹೆಚ್ಚು  ಫೋಟೋಗಳ ಮೂಲಕ ಕೃತಿಯನ್ನು ಅಂದಗೊಳಿಸಿದ್ದಾರೆ. ಈ ಕೃತಿಯು ಒಂದು ಕತೆಯ ರೀತಿಯಲ್ಲಿ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ ಎಂದು ಶ್ರೀ ಅಸೀದುಲ್ಲಾರವರು ಹೇಳಿದರು.
            ಕಾಲೇಜಿನ ಪ್ರಾಂಶುಪಾಲರಾದ ಡಾ. ಜಾನ್ ಕ್ಲಾರೆನ್ಸ್ ಮಿರಾಂಡರವರು ಎನ್.ಭವಾನಿಶಂಕರ್‌ರವರ ಇಂಟರ್‌ನೆಟ್ ಕಲಿಯಿರಿ ಕೃತಿಯ ಒಂದೂವರೆ ವರ್ಷದಲ್ಲಿನ ೬ನೇ ಮುದ್ರಣವನ್ನು ಮತ್ತು ೩ ತಿಂಗಳಲ್ಲಿ ಮರು ಮುದ್ರಣಗೊಂಡ ಗೆಲ್ಲುವ ದಾರಿಗಳು ಇಲ್ಲಿವೆ ಕೃತಿಯನ್ನು ಬಿಡುಗಡೆ ಮಾಡುತ್ತ ಎನ್.ಭವಾನಿಶಂಕರ್‌ರವರ ಕೃತಿಗಳ ವಾಪ್ತಿ ಕವನ, ನಾಟಕ, ಕಂಪ್ಯೂಟರ್, ಇಂಟರ್‌ನೆಟ್, ವ್ಯಕ್ತಿತ್ವ ವಿಕಸನ, ಕಾರ್ ಡ್ರೈವಿಂಗ್‌ಗಳನ್ನು ದಾಟಿ ಇದೀಗ ಕಾನೂನಿನ ಪರಿಧಿಗೆ ಬಂದು ನಿಂತಿದೆ. ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ಕೃತಿಗಳನ್ನೇ ಬರೆಯುತ್ತಿರುವುದಕ್ಕಾಗಿ ಲೇಖಕರನ್ನು ಅಭಿನಂದಿಸಿದರು.          
            ಡಾ. ಪದ್ಮನಾಭ ಭಟ್‌ರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ ಗೋಪಾಲಕೃಷ್ಣ ಸಾಮಗರವರು ವಂದಿಸಿದರು. ಅಶ್ವಿನ್ ಲಾರೆನ್ಸ್ ಕರ್ನೇಲಿಯೋ ಕಾರ್ಯಕ್ರಮ ನಿರ್ವಹಿಸಿದರು.
ಒಬಾಮ-ಅಮೆರಿಕವನ್ನು ಬದಲಿಸಬಲ್ಲೆಯ

ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಮುಜಾಫರ್ ಅಸ್ಸಾದಿಯವರು ತಾವು ಅಮೆರಿಕಕ್ಕೆ ಭೇಟಿ ನೀಡಿದಾಗ ಅಲ್ಲಿ ಕಂಡು ಬಂದ ಕರಿಯ ನೀಗ್ರ್ರೋಗಳನ್ನು ಕುರಿತಂತಹ ತಾರತಮ್ಯವನ್ನು ಎಳೆ ಎಳೆಯಾಗಿ ವಣರ್ಿಸಿದರು. ಅಮೆರಿಕದ ಬಂಡವಾಳಶಾಹಿ ಆರಂಭಗೊಂಡಿದ್ದೇ ಕರಿಯರ ಬೆವರಿನಿಂದ ಎಂದು ಹೇಳುತ್ತ, ಆ ಜನಾಂಗದಲ್ಲಿ ಹುಟ್ಟಿ ಬಂದ ಒಬಾಮ ಅವರ ಪರಿಸ್ಥಿತಿಯನ್ನು ಬದಲಿಸಬಲ್ಲರೆ ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಅಮೆರಿಕದ ಬಿಳಿಯರು ಅಮೆರಿಕದ ಮೂಲನಿವಾಸಿಗಳನ್ನು ಯುದ್ಧ ಮಾಡದೆಯೆ ನಾಶ ಮಾಡಿದ ರೀತಿ, ಕಪ್ಪು ನೀಗ್ರೋಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಟೀಕಿಸಿದರು. ಅಮೆರಿಕವನ್ನು ಬದಲಾಯಿಸುವುದು ಒಬಾಮರವರಿಗೆ ಸಾಧ್ಯವಾಗಿಲ್ಲ ಎಂದು ಹೇಳಿದರು.   
ಪ್ರಪಂಚದ ಶ್ರೀಮಂತ ದೇಶಗಳಲ್ಲಿನ ಶೋಷಣೆಯನ್ನು ವಿಶ್ಲೇಷಿಸಿದರು. ಚೀನಾದ ಬೀಜಿಂಗ್ನಲ್ಲಿ ಎಲ್ಲವೂ ಶ್ರೀಮಂತ. ಬೀಜಿಂಗ್ನ ಹೊರಗೆ ಹೋದರೆ ಕಡು ಬಡತನವಿದೆ. ಇದರ ಜೊತೆಗೆ ತಾವು ಭೇಟಿ ನೀಡಿದ ನೆದರ್ಲ್ಯಾಂಡ್, ಇರಾನ್, ಮಲೇಶಿಯ, ಬಾಂಗ್ಲಾ, ಇಂಗ್ಲೆಂಡ್, ಥೈಲ್ಯಾಂಡ್, ಮಲೇಶಿಯ, ಮೊಜಾಂಬಿಕ್, ಕೆನ್ಯಾ, ದಕ್ಷಿಣ ಆಫ್ರಿಕಾ, ಮಧ್ಯ ಪ್ರಾಚ್ಯ ಇತ್ಯಾದಿ ದೇಶಗಳ ಸಾಮಾಜಿಕ ಸ್ಥಿತಿ ಗತಿಗಳನ್ನು ಹೋಲಿಸಿ ವಿಶ್ಲೇಷಿಸಿದರು.    
ಪ್ರೊ. ಗೋಪಾಲಕೃಷ್ಣ ಸಾಮಗರವರು ಸ್ವಾಗತಿಸಿದರು. ಎನ್.ಭವಾನಿಶಂಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಎಸ್ ಪದ್ಮನಾಭ ಭಟ್ರವರು ವಂದಿಸಿದರು. ಪ್ರಾಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಶುಭ ಕೋರಿದರು.      
ದಿಕ್ಕು ತಪ್ಪಿದ ಪದವಿ ಶಿಕ್ಷಣ-ಶಿರ್ವದಲ್ಲಿ ವಿಚಾರಗೋಷ್ಠಿ

ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ಪದವಿ ಶಿಕ್ಷಣದ ಸ್ವರೂಪ ಮತ್ತು ಸುಧಾರಣೆಯ ಸಾಧ್ಯತೆಗಳನ್ನು ಕುರಿತಂತೆ ವಿಚಾರಗೋಷ್ಠಿ ನಡೆಯಿತು. ಕಾರ್ಯಕ್ರಮದ ಸಂಚಾಲಕರಾದ ಡಾ. ಪದ್ಮನಾಭ ಭಟ್‌ರವರು ಮಾತನಾಡುತ್ತ ಭಾರತ ದೇಶದಲ್ಲಿ ಶಿಕ್ಷಣವು ನಡೆದು ಬಂದ ದಾರಿಯ ಅವಲೋಕನ ಮಾಡಿದರು. ಇಂದಿನ ಸೆಮಿಸ್ಟರ್ ಸಿಸ್ಟಂನಲ್ಲಿ ವಿದ್ಯಾರ್ಥಿಗಳು ಬಾಯಿ ಪಾಠ ಹೊಡೆಯುವ ಯಂತ್ರಗಳಾಗಿ ಬಿಟ್ಟಿದ್ದಾರೆ. ನಾಲ್ಕು ತಿಂಗಳಲ್ಲಿ ವಿದ್ಯಾರ್ಥಿಗಳು ಮೂರು ಪರೀಕ್ಷೆ ಬರೆಯಬೇಕು. ಪ್ರಾಧ್ಯಾಪಕರು ನ್ಯಾಕ್ ಸಮಿತಿಗೆ ತೋರಿಸಲೆಂದು ದಾಖಲೆಗಳನ್ನು ಬರೆಯುವ ಗುಮಾಸ್ತರಾಗುತ್ತಿದ್ದಾರೆ ಎಂದರು.
            ಲೇಖಕರಾದ ಎನ್.ಭವಾನಿಶಂಕರ್‌ರವರು ಮಾತನಾಡುತ್ತ ಹಿಂದಿನ ವಾರ್ಷಿಕ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳು ನಾನಾ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಅಲ್ಲಿ ಅವರ ಸೃಜನಶೀಲತೆಗೆ ಅವಕಾಶವಿತ್ತು. ಆದರೆ ಇಂದಿನ ಜಾಗತೀಕರಣ ಮತ್ತು ವಾಣಿಜ್ಯೀಕರಣ ವಿದ್ಯಾರ್ಥಿಗಳನ್ನು ಹಣ ಗಳಿಸುವ ಯಂತ್ರಗಳನ್ನಾಗಿಸುತ್ತಿದೆ. ಯಾವ ಕೋರ್ಸ್ ಹೆಚ್ಚು ಸಂಬಳದ ಉದ್ಯೋಗ ಕೊಡುತ್ತದೋ ಅದಕ್ಕೆ ಹೆಚ್ಚು ಬೇಡಿಕೆ. ಅದಕ್ಕೆ ಹೆಚ್ಚು ಡೊನೇಶನ್. ಶಿಕ್ಷಣ ಕ್ಷೇತ್ರವೆ ವ್ಯಾಪಾರೀಕರಣಕ್ಕೊಳಗಾದರೆ ದೇಶದ ಭವಿಷ್ಯವೇನು ಎಂದು ಕೇಳಿದರು.
            ಪ್ರೊ. ಸುಬ್ರಹ್ಮಣ್ರವರು ಮಾತನಾಡುತ್ತ ಇಂದಿನ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳಿಗೆ ಓದಿದ್ದನ್ನು ಜೀರ್ಣ ಮಾಡಿಕೊಳ್ಳಲು ಅವಕಾಶ ಕೊಡುತ್ತಿಲ್ಲ. ಪರೀಕ್ಷೆ ಮುಗಿದ ಮೇಲೆ ನೀನು ಹಿಂದಿನ ಸೆಮಿಸ್ಟರ್‌ನಲ್ಲಿ ಓದಿದ್ದೇನು ಎಂದು ಕೇಳಿದರೆ ಅವನಿಗೆ ಏನೂ ನೆನಪಿರುವುದಿಲ್ಲ. ಕಾಲೇಜು ಶಿಕ್ಷಣದಲ್ಲಿ ಬಾಯಿ ಪಾಠ ಹೊಡೆದು ಬರೆಯುವ ಪರೀಕ್ಷೆಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡಿ ವಿದ್ಯಾರ್ಥಿಯ ನಿಜವಾದ ಜ್ಞಾನದ ಪರೀಕ್ಷಗೆ ಅವಕಾಶ ಮಾಡಿಕೊಡಬೇಕು ಎಂದರು.
            ಪ್ರೊ. ವಿನ್ಸೆಂಟ್‌ರವರು ಮಾತನಾಡುತ್ತ ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಆ ದಾರಿಯಲ್ಲಿ ನಡೆಯಬೇಕು. ಮೊಲ ಓಡುವುದರಲ್ಲಿ ಸಾಧನೆ ಮಾಡಬೇಕು, ಅಳಿಲು ಮರ ಹತ್ತುವುದರಲ್ಲಿ ಸಾಧನೆ ಮಾಡಬೇಕು. ಇದು ಉಲ್ಟಾ ಆಗಬಾರದು ಎಂದರು. ಪ್ರೊ. ಸರಿತಾ ಆಳ್ವರವರು ಇಂದು ಶೈಕ್ಷಣಿಕ ಸಾಧನಗಳ ಸಂಖ್ಯೆ ಹೆಚ್ಚಾಗಿದೆ. ವಿದ್ಯೆ ಕಲಿಸುವುದಕ್ಕಾಗಿ ನಾನಾ ರೀತಿಯ ತಂತ್ರಜ್ಞಾನ ಬಂದಿದೆ. ಕಂಪ್ಯೂಟರ್, ಪ್ರ್ರೊಜೆಕ್ಟರ್, ಪವರ್ ಪಾಯಿಂಟ್, ಟಚ್ ಬೋರ್ಡ್, ಎಸಿ ರೂಂ ಎಲ್ಲಾ ಇದೆ. ಆದರೆ ಇವುಗಳ ನಡುವೆ ಜ್ಞಾನ ಕಾಣೆಯಾಗುತ್ತಿರುವುದು ವಿಷಾದನೀಯ ಎಂದರು.       

No comments:

Post a Comment