ಪದವಿ ಕಾಲೇಜಿನ ವಿದ್ಯಾರ್ಥಿಗಳು ಹೊಣೆಗಾರಿಕೆಯಿಲ್ಲದವರು ಎಂಬುದು ತಪ್ಪು ಕಲ್ಪನೆ. ಶಿರ್ವದ ಸಂತ ಮೇರಿ ಪದವಿ ಕಾಲೇಜಿನ ೪೦ ವಿದ್ಯಾರ್ಥಿಗಳು ಹಳ್ಳಿ ಹಳ್ಳಿಗಳನ್ನು ಸುತ್ತಾಡಿ ತುಳುನಾಡಿನ ಜೀವನ, ಸಂಸ್ಕೃತಿ ಮತ್ತು ಪರಂಪರೆಯನ್ನು ಕುರಿತಂತೆ ವ್ಯಕ್ತಿಗಳನ್ನು ಸಂದರ್ಶಿಸಿ ಬರೆದ ೪೦ ಸಂದರ್ಶನ ಲೇಖನಗಳ ಸಂಗ್ರಹವಾದ ಗ್ರಾಮ ಲೋಕ ಎನ್ನುವ ಕೃತಿಯನ್ನು ಡಾ. ಪದ್ಮನಾಭಭಟ್‌ರವರು ಬಿಡುಗಡೆ ಮಾಡಿದರು.
ಡಾ. ಪದ್ಮನಾಭಭಟ್‌ರವರು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಅವರಿಂದ ಭೌದ್ಧಿಕ ನೆಲೆಯ ಯಾವುದೇ ಕೆಲಸವನ್ನು ಮಾಡಿಸಬಹುದು ಎಂಬುದಕ್ಕೆ ಈ ಕೃತಿಯೇ ಸಾಕ್ಷಿ ಎಂದರು. ಈ ಕೃತಿಯು ಮರೆಯಾಗುತ್ತಿರುವ ತುಳುನಾಡಿನ ಜನಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ನಿವೇದಿತ ಮತ್ತು ಅಕ್ಷತಾರವರು ಪಾಡ್ದನ ಮತ್ತು ನಾಟಿ ಪಾಡ್ದನ ಎಂಬ ಲೇಖನಗಳಲ್ಲಿ ತಾವು ಹಾಡಿಸಿದ ಪಾಡ್ದನವನ್ನು ಬರೆದು ಅದರ ಸಾಂಸ್ಕೃತಿಕ ವಿಶ್ಲೇಷಣೆಯನ್ನು ನಡೆಸಿರುವುದು ನನಗೆ ಬಹಳ ಇಷ್ಟವಾಯಿತು. ಅದೇ ರೀತಿಯಲ್ಲಿ ಶ್ರೀಲತಾರವರು ಅವಸಾನದ ಅಂಚಿಗೆ ಸಾಗುತ್ತಿರುವ ನೇಕಾರರ ಕೈಮಗ್ಗದ ದುರಂತ ಚಿತ್ರಣದ ವಿಶ್ಲೇಷಣೆಯನ್ನು ಆಧುನಿಕತೆ ಮತ್ತು ಆರ್ಥಿಕ ನೆಲೆಯಲ್ಲಿ ಮಾಡಿದ್ದಾರೆ. ಸಂಧ್ಯಾಕುಮಾರಿ ಬರೆದ ಮಣ್ಣಿನ ಮಡಕೆಯ ನಿರ್ಮಾಣದ ಕತೆ ಮತ್ತು ವ್ಯಥೆ, ಶುಭ ಬರೆದ ಕಮ್ಮಾರನ ಬದುಕು, ಪ್ರಿಯಾಂಕ ಬರೆದ ಮರುವಾಯಿ ಆರಿಸುವವರ ಜೀವನ, ಭವ್ಯ ಪೂಜಾರಿ ಬರೆದ ಮೂರ್ತೆದಾರಿಕೆ, ದಿವ್ಯ ಬರೆದ ಆಟಿ ಸೋಣದ ಗಮ್ಮತ್, ಮಲ್ಲಿಕಾ ಜೋಗಿಯವರ ಮಟ್ಟುಗುಳ್ಳ ಕೃಷಿಯ ಅವಸಾನದ ರೀತಿ, ಸುಪ್ರಿಯ ಬರೆದ ಕಾಪುವುನ ಪಿಲಿಕೋಲ, ಶೈಲೇಶ್ ಬರೆದ ಮಲ್ಲಾರಿನ ಟಿಪ್ಪು ಸುಲ್ತಾನ್ ಕೋಟೆ, ಪ್ರಮೀಳಾ ಬರೆದ ಆಧುನಿಕತೆಯು ಕೊರಗರ ಬದುಕಿಗೆ ತಂದ ಅತಂತ್ರತೆಯನ್ನು ಕುರಿತ ಲೇಖನಗಳು ನನಗೆ ಇಷ್ಟವಾದವು.
`ಅಮಿತ್ ರಾಯ್ ಮತಯಸ್‌ರವರು ಮಲ್ಲಿಗೆ ಗಿಡಗಳಿಗೆ ವಿಷವನ್ನು ಸಿಂಪಡಿಸುವುದನ್ನೇ ಕಸುಬನ್ನಾಗಿ ಮಾಡಿಕೊಂಡಿರುವ ಎಡ್ವರ್ಡ್ ಮಾರ್ಟಿಸ್‌ರವರ ಬದುಕನ್ನು ವಿಶ್ಲೇಷಿಸಿದ್ದಾರೆ. ಅದೇ ರೀತಿಯಲ್ಲಿ ಜಯಶ್ರೀ ಶೆಟ್ಟಿ ಬರೆದ ಗೇರು ಬೀಜದ ಕಾರ್ಖಾನೆಯ ಕೂಲಿಕಾರರ ಜೀವನ, ಟೀನಾ ಬರೆದ ರಬ್ಬರ್ ಮರದ ಕೃಷಿಯ ಸ್ವರೂಪ ಮತ್ತು ಶ್ರುತಿ, ಲಿಖಿತ, ಅಖಿಲ, ರಮ್ಯ ಆರ್, ಸೌಮ್ಯಶ್ರೀ, ಡೆಲಿಟ ಕ್ರಿಸ್ಟಲ್, ಸುಶ್ಮಿತ ಆರ್., ಲವಿಟಾ ಹಾಗೂ ಇತರರ ಲೇಖನಗಳು ಚೆನ್ನಾಗಿವೆ ಎಂದರು.
ಪ್ರಾಂಶುಪಾಲರು ಮಾತನಾಡುತ್ತ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರು ತಮ್ಮ ಹಳ್ಳಿಗಳಲ್ಲಿನ ಪ್ರಾತಿನಿಧಿಕ ವ್ಯಕ್ತಿಗಳನ್ನು ಸಂದರ್ಶಿಸುವಂತೆ ಮಾಡಿ ಅವರಿಂದ ೪೦೦ಕ್ಕೂ ಮಿಕ್ಕಿ ಲೇಖನಗಳನ್ನು ಬರೆಸಿ ಅವುಗಳಲ್ಲಿ ೪೦ನ್ನು ಆರಿಸಿ ಪ್ರಕಟಿಸಿದ ಕೃತಿಯ ಸಂಪಾದಕರಾದ ಕನ್ನಡ ವಿಭಾಗದ ಪ್ರಾಧ್ಯಾಕರಾದ ಎನ್.ಭವಾನಿಶಂಕರ್‌ರವರನ್ನು ಅಭಿನಂದಿಸಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಎನ್.ಭವಾನಿಶಂಕರ್‌ರವರು ವಿದ್ಯಾರ್ಥಿಗಳ ಬಗ್ಗೆ ಅಧ್ಯಾಪಕನಾದವನಿಗೆ ಕಾಳಜಿ ಇದ್ದರೆ ಅವರಿಂದ ಯಾವುದೇ ಸಾಧನೆಯನ್ನು ಮಾಡಿಸಬಹುದು ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ಗೋಪಾಲಕೃಷ್ಣ ಸಾಮಗರವರು ಸ್ವಾಗತಿಸಿದರು. ಪ್ರೊ. ಸರಿತಾ ಆಳ್ವರವರು ಕೃತಜ್ಞತೆ ಸಲ್ಲಿಸಿದರು.
No comments:
Post a Comment