Saturday, September 17, 2011

ಅಣ್ಣಾ ಹಜಾರೆಯವರ ಹೋರಾಟ-ವಿಚಾರ ಸಂಕಿರಣ
ಅಣ್ಣಾ ಹಜಾರೆಯವರ ಹೋರಾಟವನ್ನು ಕುರಿತಂತೆ ಸಂತ ಮೇರಿ ಕಾಲೇಜಿನ ವಿದ್ಯಾರ್ಥಿ ಸಂಘ ಮತ್ತು ಕನ್ನಡ ವಿಭಾಗದ ವತಿಯಿಂದ ತಾ. ೨೬-೦೮-೨೦೧೧ರಂದು ವಿಚಾರ ಸಂಕಿರಣ ನಡೆಯಿತು. ಈ ವಿಚಾರ ಸಂಕಿರಣದ ಸಂಯೋಜಕರಾದ ಎನ್.ಭವಾನಿಶಂಕರ್‌ರವರು ಪ್ರಸಕ್ತ ಚಳುವಳಿಯು ನಿಷ್ಕಲಂಕ ವ್ಯಕ್ತಿತ್ವದ ಅಣ್ಣಾ ಹಜಾರೆಯವರು ಈ ಹೋರಾಟದ ಆಶಾ ಬಿಂದುವಾಗಿರುವುದು ಮತ್ತು ಭಾರತೀಯ ಜನ ಸಮುದಾಯದಲ್ಲಿ ಭ್ರಷ್ಟಾಚಾರದ ಬಗ್ಗೆ ತುಂಬಿಕೊಂಡ ಆಕ್ರೋಶವನ್ನು ಆಧರಿಸಿದೆ ಎಂದರು. ಡಾ. ಪದ್ಮನಾಭ ಭಟ್‌ರವರು ಲೋಕಪಾಲ ಮಸೂದೆಯು ರಾಜಕಾರಣಿಗಳ ನಿರಾಸಕ್ತಿಯಿಂದಾಗಿ ಚಾರಿತ್ರಿಕವಾಗಿ ತಿರಸ್ಕಾರಗೊಳ್ಳತ್ತಾ ಬಂದ ರೀತಿಯನ್ನು ಹೇಳಿದರೆ, ಪ್ರೊ. ಸುಬ್ರಹ್ಮಣ್ಯರವರು ಗಾಂಧಿ, ಜೆಪಿ ಮತ್ತು ಅಣ್ಣಾ ಹಜಾರೆಯವರ ಚಳವಳಿಯ ಅವಲೋಕನಗೈದರು. ಪ್ರೊ. ವಿನ್ಸೆಂಟ್ ಡಿಸೋಜರು ಪ್ರಸ್ತುತ ಕಾಲಸಂದರ್ಭದಲ್ಲಿನ ಭ್ರಷಾಚಾರದ ಅಗಾಧತೆಯನ್ನು ಪರಿಚಯಿಸುತ್ತ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ತಮ್ಮ ಕೆಲಸವನ್ನು ನಿರ್ವಹಿಸುತ್ತಲೆ ಈ ಚಳವಳಿಯನ್ನು ಬೆಳೆಸಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದರು. ಪ್ರೊ. ಸರಿತಾ ಡಿಸೋಜರವರು ರಾಜಕಾರಣದ ಅವಸ್ಥೆಗಿಂತ ಪ್ರಜೆಗಳ ಹೊಣೆಗಾರಿಕೆ, ಭ್ರಷ್ಟಾಚಾರವನ್ನು ಪ್ರಶ್ನಿಸುವ ಮನೋಧರ್ಮ ಮತ್ತು ಪ್ರಾಮಾಣಿಕತೆ ಬಹಳ ಮುಖ್ಯವಾದುದೆಂದು ಹೇಳಿದರು. ಗಾಂಧಿ ಟೋಪಿ ಧರಿಸಿದ ವಿದ್ಯಾರ್ಥಿಗಳ ಕುತೂಹಲಕರವಾದ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿದರು. ಪ್ರಾಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತೋರ್ಪಡಿಸಿದ ಸಾಮಾಜಿಕ ಜವಾಬ್ದಾರಿಯನ್ನು ಪ್ರಶಂಸಿಸಿದರು. ದ್ವಿತೀಯ ಬಿ‌ಎ ವಿದ್ಯಾರ್ಥಿಯಾದ ಅಶ್ವಿನ್ ಲಾರೆನ್ಸ್ ಕರ್ನೇಲಿಯೋರವರು ಕಾರ್ಯಕ್ರಮವನ್ನು ನಿರ್ವಹಿಸಿದರು.

No comments:

Post a Comment