Thursday, September 22, 2011

ಮಹಿಳೆ ವೈಯಕ್ತಿಕವಾಗಿ ಬೆಳೆಯಬೇಕು


ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯವನ್ನು ಕುರಿತಂತೆ ವಿಚಾರಗೋಷ್ಠಿ ನಡೆಯಿತು. ದೇಶದಲ್ಲಿ ಮಹಿಳಾ ದೌರ್ಜನ್ಯವು ಹೆಚ್ಚುತ್ತಿರುವುದರಿಂದ ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

ಸಂತ ಮೇರಿ ಸ್ನಾತಕೋತ್ತರ ವಿಭಾಗದ ಪ್ರೊ. ಶೋಭಾ ಡಿಸೋಜರವರು ಮಹಿಳಾ ದೌರ್ಜನ್ಯದ ಚಾರಿತ್ರಿಕ ಸ್ವರೂಪವನ್ನು ಮಹಿಳೆಯ ದೈಹಿಕ ಪರಿಸ್ಥಿತಿ, ಆ ಕಾಲದ ಅರಿವಿನ ಕೊರತೆ ಮತ್ತು ಸಾಮಾಜಿಕ ಆರ್ಥಿಕ ಸ್ವರೂಪದ ಹಿನ್ನೆಲೆಯ ನೆಲೆಯಲ್ಲಿ ವಿಶ್ಲೇಷಿಸಿದರು. ಅನಂತರ ಮಾತನಾಡಿದ ಪ್ರೊ. ಜಸಿಂಥಾ ಫೆರ್ನಾಂಡಿಸ್‌ರವರು ವಿಜ್ಞಾನದ ಕ್ಷೇತ್ರದಲ್ಲಿ ಬದಲಾವಣೆಯಾದಂತೆ, ಕೈಗಾರಿಕೀಕರಣ ಮತ್ತು ಆಧುನಿಕತೆಯು ಸ್ತ್ರೀಯರ ಬದುಕಿನಲ್ಲಿ ಉಂಟು ಮಾಡಿದ ಬದಲಾವಣೆಯು ಅತ್ಯಂತ ಮಹತ್ವದ್ದೆಂದು ಹೇಳಿದರು.

ಫ್ರೀಡಾ ಡಿಸೋಜರವರು ಪಶ್ಚಿಮದ ಸಂಸ್ಕೃತಿ ಮತ್ತು ಜಾಗತೀಕರಣವು ನಮ್ಮ ಸಮಾಜದಲ್ಲಿ ಹುಟ್ಟಿಸಿರುವ ಅಲ್ಲೋಲ ಕಲ್ಲೋಲದ ಸ್ವರೂಪವನ್ನು ಪರಿಚಯಿಸಿದರೆ ಯಶೋದರವರು ನಗರ ಮತ್ತು ಗ್ರಾಮೀಣ ಸಂದರ್ಭದಲ್ಲಿ ದೌರ್ಜನ್ಯದ ಹಿಂದಿರುವ ಕಾರಣಗಳನ್ನು ಮತ್ತು ಅದರ ಸ್ವರೂಪವನ್ನು ವಿಶ್ಲೇಷಿಸಿದರು. ಪ್ರೊ. ವಿನ್ಸೆಂಟ್ ಡಿಸೋಜರವರು ಮಹಿಳಾ ದೌರ್ಜನ್ಯವನ್ನು ನಿವಾರಿಸುವುದಕ್ಕೆ ಸಂಬಂಧಿಸಿದಂತೆ ಆಗಬೇಕಾದ ಕೆಲಸಗಳು ಮತ್ತು ಇದರಲ್ಲಿ ಪುರುಷರ ಪಾತ್ರ ಏನಿರಬೇಕೆಂಬುದನ್ನು ವಿವರಿಸಿದರು.

ಗೋಷ್ಠಿಯ ಸಂಚಾಲಕರಾದ ಎನ್.ಭವಾನಿಶಂಕರ್‌ರವರು ಮಹಿಳೆಯರ ಸಬಲೀಕರಣ ಆಗಬೇಕಾದರೆ ಅವರಿಗೆ ದೊರಕಬೇಕಾದ ಶಿಕ್ಷಣ ಮತ್ತು ಸ್ತ್ರೀ ಶೋಷಣೆಯ ಸ್ವರೂಪದ ಅರಿವು ಬಹಳ ಮುಖ್ಯವಾದುದೆಂದು ಹೇಳುತ್ತಾ ಪ್ರತಿಯೊಬ್ಬ ಸ್ತ್ರೀ ತನ್ನ ಸಮಸ್ಯೆಯನ್ನು ಕುರಿತಂತೆ ತಾನೇ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆಯೆಂದು ಹೇಳಿದರು. ಇದರ ಜೊತೆಗೆ ಸ್ತ್ರೀಯರು ಒಂದು ಸಮೂಹವಾಗಿ ತಮ್ಮ ಮೇಲೆ ಆಗುವ ದೌರ್ಜನ್ಯದ ವಿರುದ್ಧ ಹೋರಾಡಬೇಕಾದ ಅಗತ್ಯವಿದೆಯಾದರೂ ಸ್ತ್ರೀಯರ ಮೇಲಿನ ದೌರ್ಜನ್ಯವನ್ನು ಕೇವಲ ಸ್ರ್ರೀಯರ ಸಮಸ್ಯೆಯಾಗಿ ನೋಡದೆ ನಮ್ಮ ಸಮಾಜದ ಒಂದು ಕಪ್ಪು ಚುಕ್ಕೆ ಎಂದು ತಿಳಿದು ಅದನ್ನು ಸರಿಪಡಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.

ಜೆನಿಫರ್‌ವಾಜ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಲೋಯಲ್ ಕೊರೆಯ ವಂದಿಸಿದರು.


ಕಾರ್ ಡ್ರೈವಿಂಗ್ ಕುರಿತ ಕನ್ನಡದ ಮೊದಲ ಕೃತಿ
ಕಾರ್ ಡ್ರೈವಿಂಗ್ ಮತ್ತು ನಿರ್ವಹಣೆ-ಕೃತಿ ಬಿಡುಗಡೆ

ಸಂತ ಮೇರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ಭವಾನಿಶಂಕರ್‌ರವರ ಕಾರ್ ಡ್ರೈವಿಂಗ್ ಮತ್ತು ನಿರ್ವಹಣೆ ಎಂಬ ಕೃತಿಯನ್ನು ಬಜ್ಪೆಯ ನಿರಂಜನ ಸ್ವಾಮಿ ಪಾಲಿಟೆಕ್ನಕ್‌ನ ಮೆಕಾನಿಕಲ್ ವಿಭಾಗದ ಪ್ರಾಧ್ಯಾಪಕರಾದ ಎಂ. ದಿವಾಕರ ಶೆಟ್ಟಿಯವರು ಬಿಡುಗಡೆ ಮಾಡಿದರು.
ಈ ವಿಷಯವನ್ನು ಕುರಿತಂತೆ ಕನ್ನಡದಲ್ಲಿ ಬಂದ ಮೊದಲ ಕೃತಿ ಇದಾಗಿದೆ. ಈ ಕೃತಿಯಲ್ಲಿ ಕಾರ್ ಡ್ರೈವಿಂಗನ್ನು ಕಲಿಯಬೇಕಾದ ರೀತಿ, ಕಾರಿನ ಯಂತ್ರಗಳ ಎಲ್ಲಾ ಬಿಡಿ ಭಾಗಗಳು, ಅವುಗಳು ಕೆಲಸ ಮಾಡುವ ರೀತಿ, ಕಾರ್ ಹಾಳಾಗದಂತೆ ಗಮನಿಸುತ್ತಿರಬೇಕಾದ ಕಾರಿನ ಭಾಗಗಳು, ಟ್ರಾಫಿಕ್ ಸಿಗ್ನಲ್‌ಗಳ ವಿವರಣೆ, ಡ್ರೈವಿಂಗ್ ಪರೀಕ್ಷೆಗೆ ಮಾಡಬೇಕಾದ ತಯಾರಿ ಮತ್ತು ಅಪಘಾತವನ್ನು ತಡೆಯಬಹುದಾದ ರೀತಿ-ಇವುಗಳನ್ನು ಅತ್ಯಂತ ಸರಳವಾದ ಭಾಷೆಯಲ್ಲಿ ಬರೆಯಲಾಗಿದೆ. ಇವುಗಳನ್ನು ವಿವರಿಸಲು ಲೇಖಕರು ೩೦೦ಕ್ಕೂ ಹೆಚ್ಚು ಚಿತ್ರಗಳನ್ನು ನೀಡಿದ್ದಾರೆ. ಇದು ಅತ್ಯಮೂಲ್ಯವಾದ ಪುಸ್ತಕ ಎಂದು ಎಂ. ದಿವಾಕರ ಶೆಟ್ಟಿಯವರು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿಯಾದ ಲಕ್ಷ್ಮೀ ವೆಂಕಟೇಶ್ ಡ್ರೈವಿಂಗ್ ಸ್ಕೂಲ್‌ನ ಕೆ. ವೆಂಕಟೇಶ್ ಭಟ್‌ರವರು ಮಾತನಾಡಿ ವಿಜ್ಞಾನದಲ್ಲಿ ಮೊದಲು ಥಿಯರಿ ಕಲಿಯುವುದು ಅನಂತರ ಪ್ರಾಕ್ಟಿಕಲ್ಸ್ ಎಂಬುದು ವಿಧಾನ. ಆದರೆ ಕಾರು ಕಲಿಯುವವನು ಡ್ರೈವಿಂಗ್ ಸೀಟಿನಲ್ಲಿ ಕುಳಿತು ಕಾರು ಬಿಡಲು ಆರಂಭಿಸುತ್ತಾನೆ. ಅದನ್ನು ಕುರಿತಂತೆ ಅವನಲ್ಲಿ ಯಾವುದೇ ಥಿಯರಿ ಜ್ಞಾನ ಇರುವುದಿಲ್ಲ. ಕನ್ನಡದ ಈ ಮೊದಲ ಪುಸ್ತಕ ಈ ಎಲ್ಲ ಕೊರತೆಗಳನ್ನು ಸಮಗ್ರವಾಗಿ ತುಂಬಿಕೊಟ್ಟಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎನ್.ಭವಾನಿಶಂಕರ್‌ರವರ ಅನೇಕ ಹೊಸ ವಿಷಯಗಳನ್ನು ಸೇರಿಸಿದ ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ ಎಂಬ ಕೃತಿಯ ಮೂರನೆಯ ಮುದ್ರಣವನ್ನು ಪ್ರಾಂಶುಪಾಲರಾದ ಡಾ. ಜಾನ್ ಕ್ಲಾರೆನ್ಸ್ ಮಿರಾಂಡರವರು, ಅನೇಕ ಹೊಸ ವಿಷಯಗಳನ್ನು ಸೇರಿಸಿದ ಇಂಟರ್‌ನೆಟ್ ಕಲಿಯಿರಿ ಎಂಬ ಕೃತಿಯ ಐದನೆಯ ಮುದ್ರಣವನ್ನು ಕೆ. ವೆಂಕಟೇಶ್ ಭಟ್‌ರವರು ಬಿಡುಗಡೆ ಮಾಡಿದರು. ಕೇವಲ ಹತ್ತು ತಿಂಗಳ ಅವಧಿಯಲ್ಲಿ ಈ ಕೃತಿಗಳು ಮರು ಮುದ್ರಣಗೊಳ್ಳುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾ ಎನ್.ಭವಾನಿಶಂಕರ್‌ರವರ ವಿಜ್ಞಾನ ಸಾಹಿತ್ಯವನ್ನು ಕನ್ನಡಕ್ಕೆ ಒಗ್ಗಿಸುವ ಪ್ರಯತ್ನವನ್ನು ಶ್ಲಾಘಿಸಿದರು.

ಡಾ. ಪದ್ಮನಾಭ ಭಟ್‌ರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ ಗೋಪಾಲಕೃಷ್ಣ ಸಾಮಗರವರು ವಂದಿಸಿದರು. ಅಶ್ವಿನ್ ಲಾರೆನ್ಸ್ ಕರ್ನೇಲಿಯೋ ಕಾರ್ಯಕ್ರಮ ನಿರ್ವಹಿಸಿದರು.

No comments:

Post a Comment