Friday, January 28, 2011

ಕಾಲೇಜು ವಿದ್ಯಾರ್ಥಿಗಳ ಸಂದರ್ಶನ ಲೇಖನಗಳ ಗ್ರಾಮ ಲೋಕ ಬಿಡುಗಡೆ


ಪದವಿ ಕಾಲೇಜಿನ ವಿದ್ಯಾರ್ಥಿಗಳು ಹೊಣೆಗಾರಿಕೆಯಿಲ್ಲದವರು ಎಂಬುದು ತಪ್ಪು ಕಲ್ಪನೆ. ಶಿರ್ವದ ಸಂತ ಮೇರಿ ಪದವಿ ಕಾಲೇಜಿನ ೪೦ ವಿದ್ಯಾರ್ಥಿಗಳು ಹಳ್ಳಿ ಹಳ್ಳಿಗಳನ್ನು ಸುತ್ತಾಡಿ ತುಳುನಾಡಿನ ಜೀವನ, ಸಂಸ್ಕೃತಿ ಮತ್ತು ಪರಂಪರೆಯನ್ನು ಕುರಿತಂತೆ ವ್ಯಕ್ತಿಗಳನ್ನು ಸಂದರ್ಶಿಸಿ ಬರೆದ ೪೦ ಸಂದರ್ಶನ ಲೇಖನಗಳ ಸಂಗ್ರಹವಾದ ಗ್ರಾಮ ಲೋಕ ಎನ್ನುವ ಕೃತಿಯನ್ನು ಡಾ. ಪದ್ಮನಾಭಭಟ್‌ರವರು ಬಿಡುಗಡೆ ಮಾಡಿದರು.
ಡಾ. ಪದ್ಮನಾಭಭಟ್‌ರವರು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಅವರಿಂದ ಭೌದ್ಧಿಕ ನೆಲೆಯ ಯಾವುದೇ ಕೆಲಸವನ್ನು ಮಾಡಿಸಬಹುದು ಎಂಬುದಕ್ಕೆ ಈ ಕೃತಿಯೇ ಸಾಕ್ಷಿ ಎಂದರು. ಈ ಕೃತಿಯು ಮರೆಯಾಗುತ್ತಿರುವ ತುಳುನಾಡಿನ ಜನಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ನಿವೇದಿತ ಮತ್ತು ಅಕ್ಷತಾರವರು ಪಾಡ್ದನ ಮತ್ತು ನಾಟಿ ಪಾಡ್ದನ ಎಂಬ ಲೇಖನಗಳಲ್ಲಿ ತಾವು ಹಾಡಿಸಿದ ಪಾಡ್ದನವನ್ನು ಬರೆದು ಅದರ ಸಾಂಸ್ಕೃತಿಕ ವಿಶ್ಲೇಷಣೆಯನ್ನು ನಡೆಸಿರುವುದು ನನಗೆ ಬಹಳ ಇಷ್ಟವಾಯಿತು. ಅದೇ ರೀತಿಯಲ್ಲಿ ಶ್ರೀಲತಾರವರು ಅವಸಾನದ ಅಂಚಿಗೆ ಸಾಗುತ್ತಿರುವ ನೇಕಾರರ ಕೈಮಗ್ಗದ ದುರಂತ ಚಿತ್ರಣದ ವಿಶ್ಲೇಷಣೆಯನ್ನು ಆಧುನಿಕತೆ ಮತ್ತು ಆರ್ಥಿಕ ನೆಲೆಯಲ್ಲಿ ಮಾಡಿದ್ದಾರೆ. ಸಂಧ್ಯಾಕುಮಾರಿ ಬರೆದ ಮಣ್ಣಿನ ಮಡಕೆಯ ನಿರ್ಮಾಣದ ಕತೆ ಮತ್ತು ವ್ಯಥೆ, ಶುಭ ಬರೆದ ಕಮ್ಮಾರನ ಬದುಕು, ಪ್ರಿಯಾಂಕ ಬರೆದ ಮರುವಾಯಿ ಆರಿಸುವವರ ಜೀವನ, ಭವ್ಯ ಪೂಜಾರಿ ಬರೆದ ಮೂರ್ತೆದಾರಿಕೆ, ದಿವ್ಯ ಬರೆದ ಆಟಿ ಸೋಣದ ಗಮ್ಮತ್, ಮಲ್ಲಿಕಾ ಜೋಗಿಯವರ ಮಟ್ಟುಗುಳ್ಳ ಕೃಷಿಯ ಅವಸಾನದ ರೀತಿ, ಸುಪ್ರಿಯ ಬರೆದ ಕಾಪುವುನ ಪಿಲಿಕೋಲ, ಶೈಲೇಶ್ ಬರೆದ ಮಲ್ಲಾರಿನ ಟಿಪ್ಪು ಸುಲ್ತಾನ್ ಕೋಟೆ, ಪ್ರಮೀಳಾ ಬರೆದ ಆಧುನಿಕತೆಯು ಕೊರಗರ ಬದುಕಿಗೆ ತಂದ ಅತಂತ್ರತೆಯನ್ನು ಕುರಿತ ಲೇಖನಗಳು ನನಗೆ ಇಷ್ಟವಾದವು.
`ಅಮಿತ್ ರಾಯ್ ಮತಯಸ್‌ರವರು ಮಲ್ಲಿಗೆ ಗಿಡಗಳಿಗೆ ವಿಷವನ್ನು ಸಿಂಪಡಿಸುವುದನ್ನೇ ಕಸುಬನ್ನಾಗಿ ಮಾಡಿಕೊಂಡಿರುವ ಎಡ್ವರ್ಡ್ ಮಾರ್ಟಿಸ್‌ರವರ ಬದುಕನ್ನು ವಿಶ್ಲೇಷಿಸಿದ್ದಾರೆ. ಅದೇ ರೀತಿಯಲ್ಲಿ ಜಯಶ್ರೀ ಶೆಟ್ಟಿ ಬರೆದ ಗೇರು ಬೀಜದ ಕಾರ್ಖಾನೆಯ ಕೂಲಿಕಾರರ ಜೀವನ, ಟೀನಾ ಬರೆದ ರಬ್ಬರ್ ಮರದ ಕೃಷಿಯ ಸ್ವರೂಪ ಮತ್ತು ಶ್ರುತಿ, ಲಿಖಿತ, ಅಖಿಲ, ರಮ್ಯ ಆರ್, ಸೌಮ್ಯಶ್ರೀ, ಡೆಲಿಟ ಕ್ರಿಸ್ಟಲ್, ಸುಶ್ಮಿತ ಆರ್., ಲವಿಟಾ ಹಾಗೂ ಇತರರ ಲೇಖನಗಳು ಚೆನ್ನಾಗಿವೆ ಎಂದರು.
ಪ್ರಾಂಶುಪಾಲರು ಮಾತನಾಡುತ್ತ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರು ತಮ್ಮ ಹಳ್ಳಿಗಳಲ್ಲಿನ ಪ್ರಾತಿನಿಧಿಕ ವ್ಯಕ್ತಿಗಳನ್ನು ಸಂದರ್ಶಿಸುವಂತೆ ಮಾಡಿ ಅವರಿಂದ ೪೦೦ಕ್ಕೂ ಮಿಕ್ಕಿ ಲೇಖನಗಳನ್ನು ಬರೆಸಿ ಅವುಗಳಲ್ಲಿ ೪೦ನ್ನು ಆರಿಸಿ ಪ್ರಕಟಿಸಿದ ಕೃತಿಯ ಸಂಪಾದಕರಾದ ಕನ್ನಡ ವಿಭಾಗದ ಪ್ರಾಧ್ಯಾಕರಾದ ಎನ್.ಭವಾನಿಶಂಕರ್‌ರವರನ್ನು ಅಭಿನಂದಿಸಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಎನ್.ಭವಾನಿಶಂಕರ್‌ರವರು ವಿದ್ಯಾರ್ಥಿಗಳ ಬಗ್ಗೆ ಅಧ್ಯಾಪಕನಾದವನಿಗೆ ಕಾಳಜಿ ಇದ್ದರೆ ಅವರಿಂದ ಯಾವುದೇ ಸಾಧನೆಯನ್ನು ಮಾಡಿಸಬಹುದು ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ಗೋಪಾಲಕೃಷ್ಣ ಸಾಮಗರವರು ಸ್ವಾಗತಿಸಿದರು. ಪ್ರೊ. ಸರಿತಾ ಆಳ್ವರವರು ಕೃತಜ್ಞತೆ ಸಲ್ಲಿಸಿದರು.

Wednesday, January 19, 2011

ಕನ್ನಡದ ಇ ಲೋಕ ೨ನೆಯ ಆವೃತ್ತಿ ಬಿಡುಗಡೆ ೧೯-೦೧-೧೧

ಇಂಟರ್‌ನೆಟ್‌ನ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡವನ್ನು ಬಳಸುವುದರ ಬಗ್ಗೆ ಎನ್. ಭವಾನಿಶಂಕರ್‌ರವರು ಬರೆದಿರುವ ಕನ್ನಡದ ಇ ಲೋಕ ಎಂಬ ಪುಸ್ತಕವನ್ನು ಡಾ. ಮಾಧವಿ ಭಂಡಾರಿಯವರು ಬಿಡುಗಡೆ ಮಾಡಿ ಈ ವಿಷಯವನ್ನು ಕುರಿತಂತೆ ಇದು ಕನ್ನಡದಲ್ಲಿನ ಮೊದಲ ಪುಸ್ತಕ ಎಂದು ಅವರು ಹೇಳಿದರು.
ಪ್ರೊ. ಮಾಧವಿ ಭಂಡಾರಿಯವರು ಮಾತನಾಡುತ್ತ ಈ ಪುಸ್ತಕವು ಇಂಟರ್‌ನೆಟ್‌ನ ಕ್ಷೇತ್ರಗಳಾದ ಕನ್ನಡ ಇ ಮೈಲ್, ಕನ್ನಡದಲ್ಲಿ ಬ್ಲಾಗ್ ನಿರ್ಮಾಣ, ಕನ್ನಡ ವೆಬ್‌ಸೈಟ್, ಕನ್ನಡ ಆನ್‌ಲೈನ್ ವಿಶ್ವಕೋಶ, ಕನ್ನಡ ಆನ್‌ಲೈನ್ ಪದಕೋಶ, ಕನ್ನಡ ಸರ್ಚ್ ಇಂಜಿನ್, ಕನ್ನಡ ಇ ಪತ್ರಿಕೆಗಳು, ಕನ್ನಡ ಟೈಪ್ ಮಾಡಲು ಬರಹ ಸಾಫ್ಟ್‌ವೇರ್, ಕನ್ನಡ ಟೈಪ್ ಮಾಡಲು ನುಡಿ ಸಾಫ್ಟ್‌ವೇರ್, ಫೇಸ್ ಬುಕ್‌ನಲ್ಲಿ ಕನ್ನಡ, ಬ್ಲಾಗ್‌ನಲ್ಲಿ ಲೇಖನ, ಕವನ ಇತ್ಯಾದಿ ಬರೆಯುವುದನ್ನು ಈ ಕೃತಿ ೨೦೦ ಕ್ಕೂ ಹೆಚ್ಚು ಚಿತ್ರಗಳೊಂದಿಗೆ ಹಂತ ಹಂತವಾಗಿ ಪರಿಚಯಿಸುತ್ತದೆ ಎಂದು ಹೇಳಿದರು.
ಈ ಕೃತಿ ಪ್ರಕಟವಾದ ಕೇವಲ ಐದು ತಿಂಗಳಲ್ಲಿ ಎರಡನೆಯ ಬಾರಿ ಮುದ್ರಣವಾಗುತ್ತಿದೆ. ಈ ಸಂದರ್ಭದಲ್ಲಿ ಎನ್. ಭವಾನಿಶಂಕರ್‌ರವರು ಮೊದಲಿನ ೧೦೦ ಪುಟದ ಪುಸ್ತಕಕ್ಕೆ ೬೦ ಪುಟಗಳಷ್ಟು ಹೊಸ ವಿಷಯವನ್ನು ಸೇರಿಸಿ ಎರಡನೆಯ ಆವೃತ್ತಿಯಾಗಿಸಿದ್ದಾರೆ. ಇದರಲ್ಲಿ ಇಂಟರ್‌ನೆಟ್‌ಗೆ ನೇರವಾಗಿ ಬರೆಯಲು ಬರಹ ಐ‌ಎಂಇ ಸಾಫ್ಟ್‌ವೇರ್ ಮತ್ತು ಅದನ್ನು ಬಳಸುವ ರೀತಿ, ನುಡಿ ಅಕ್ಷರವನ್ನು ಯುನಿಕೋಡಿಗೆ ಪರಿವರ್ತಿಸುವುದು, ಕನ್ನಡದ ಪ್ರಸಿದ್ಧವಾದ ವೆಬ್ ಮ್ಯಾಗಜಿನ್ ಸಂಪದಕ್ಕೆ ಲೇಖನವನ್ನು ಬರೆಯುವುದು, ತಾಜಾ ಸುದ್ಧಿ ನೀಡುವ ಕನ್ನಡದ ಸುದ್ಧಿ ಸೈಟುಗಳ ಪರಿಚಯ, ಟ್ವಿಟ್ಟರ್ ಎಂಬ ಮೈಕ್ರೋ ಬ್ಲಾಗ್, ಇಂಟರ್‌ನೆಟ್ಟಲ್ಲಿ ಕನ್ನಡ ಟೈಪಿಸಲು ಕ್ವಿಲ್ ಪ್ಯಾಡ್, ಗೂಗಲ್ ಸರ್ಚ್ ಇಂಜಿನ್ ಮೂಲಕ ೧೩೬ ಭಾಷೆಗಳಲ್ಲಿ ವಿಷಯವನ್ನು ಹುಡುಕುವ ಅವಕಾಶ, ಗೂಗಲ್ ಮೂಲಕ ಪ್ರಪಂಚದ ೫೯ ಭಾಷೆಗಳಿಗೆ ಅನುವಾದ ಮಾಡಬಹುದಾದ ರೀತಿ, ಗೂಗಲ್ ಚಾಟ್, ಏರಿಯಲ್ ಯುನಿಕೋಡ್ ಎಂಬ ಯುನಿಕೋಡ್ ಅಕ್ಷರ ಇತ್ಯಾದಿ ಹೊಸ ವಿಷಯಗಳನ್ನು ಸೇರಿಸಿದ್ದಾರೆ.
ಈ ಪುಸ್ತಕದ ಲೇಖಕರಾದ ಎನ್. ಭವಾನಿಶಂಕರ್‌ರವರು ಒಬ್ಬ ಸಾಮಾನ್ಯ ವ್ಯಕ್ತಿಗೆ ಇಂಟರ್‌ನೆಟ್‌ನಲ್ಲಿ ಕನ್ನಡವನ್ನು ಬಳಸುವುದು ಹಾಗೂ ಕಂಪ್ಯೂಟರ್‌ನಲ್ಲಿ ಕನ್ನಡವನ್ನು ಟೈಪ್ ಮಾಡುವುದು ಸಾಧ್ಯವಾಗಬೇಕೆಂಬ ಕಾರಣಕ್ಕಾಗಿ ತಾನು ಈ ಪುಸ್ತಕವನ್ನು ಬರೆದೆನೆಂದು ತಿಳಿಸಿದರು. ತನ್ನ ಬಹುಮಖೀ ಚಟುವಟಿಕೆಗಳಿಗೆ ಪ್ರೋತ್ಶಾಹ ನೀಡುತ್ತಿರುವ ಪ್ರಾಂಶುಪಾಲರಿಗೆ ಈ ಕೃತಿಯನ್ನು ಅರ್ಪಿಸಿದ್ದೇನೆಂದು ತಿಳಿಸಿದರು.
ಪ್ರಾಂಶುಪಾಲರಾದ ಡಾ. ಜಾನ್ ಕ್ಲಾರೆನ್ಸ್ ಮಿರಾಂಡರವರು ಅಧ್ಯಕ್ಷೀಯ ಭಾಷಣ ಮಾಡುತ್ತ ಎಲ್ಲಿ ಪ್ರತಿಭೆ ಇದೆಯೋ ಅದನ್ನು ಪೋಷಿಸುವುದು ತನ್ನ ಕರ್ತವ್ಯ ಎಂದು ತಿಳಿಸಿದರು. ಎಸ್. ಪದ್ಮನಾಭಭಟ್‌ರವರು ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ರೊನಾಲ್ಡ್ ಮೊರಾಸ್‌ರವರು ಶುಭಾಶಂಸನೆಗೈದರು. ಪ್ರೊ. ಗೋಪಾಲಕೃಷ್ಣ ಸಾಮಗರು ವಂದಿಸಿದರು. ಪುಸ್ತಕದ ವಿವರಗಳಿಗಾಗಿ- http://smckannada.blogspot.com, ಲೇಖಕರು-ಫೋನ್: 9242 232323