Monday, August 6, 2012


ಕತೆಯನ್ನು ಹೇಗೆ ಬರೆಯಬೇಕು-ಶಿರ್ವದಲ್ಲಿ ಕಥಾ ಕಮ್ಮಟ



            ಕತೆ ಬರೆಯುವುದು ಪ್ರತಿಭೆಗೆ ಸಂಬಂಧಿಸಿದ ವಿಷಯ. ಹೀಗಿದ್ದರೂ ಅದರ ತಂತ್ರಗಳನ್ನು ಕಲಿಯಲು ಸಾಧ್ಯವಿದೆ. ಈ ತಂತ್ರಗಳನ್ನು ಪರಿಚಯಿಸುವುದಕ್ಕಾಗಿ ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಕಥಾ ಕಮ್ಮಟ ನಡೆಯಿತು.
            ಖ್ಯಾತ ಕತೆಗಾರರಾದ ಡಾ. ನಾ.ಮೊಗಸಾಲೆಯವರು ಕಥಾ ಕಮ್ಮಟವನ್ನು ಉದ್ಘಾಟಿಸಿದರು. ಬರಹಗಾರ ಸಂವೇದನಾಶೀಲನಾಗಿದ್ದರೆ ಅವನಿಗೆ ತನ್ನ ಸುತ್ತ ಮುತ್ತ ಮತ್ತು ಎಲ್ಲೆಲ್ಲೂ ಕತೆಗಳು ಕಾಣಿಸುತ್ತವೆ. ಅವುಗಳಿಗೆ ರೂಪು ಕೊಡುವುದು ಕತೆಗಾರನ ಕೆಲಸ ಎಂದು ಹೇಳಿದರು. ಡಾ. ಬಿ. ಜನಾರ್ಧನ ಭಟ್‌ರವರು ತರಬೇತಿ ನೀಡುತ್ತಾ ಕತೆಯು ನಿರ್ಮಾಣಗೊಳ್ಳುವ ರೀತಿಯನ್ನು ವಿಶ್ಲೇಷಿಸಿದರು.
            ಕಾದಂಬರಿಕಾರರಾದ ಕಾತ್ಯಾಯಿನಿ ಕುಂಜಿಬೆಟ್ಟುರವರು ಕಥಾ ಕಮ್ಮಟದ ಪ್ರಶ್ನೋತ್ತರ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತ ತನ್ನದೇ ಕಾದಂಬರಿಯಾದ ತೊಗಲುಗೊಂಬೆ ಯನ್ನು ಹೇಗೆ ಬರೆದೆ ಎಂಬುದನ್ನು ಪರಿಚಯಿಸಿದರು. ಕತೆಗೆ ನಾವು ಅನುಭವಿಸುವ ಜೀವನವೇ ವಸ್ತು. ಜೀವನದಲ್ಲಿ ಕಂಡದ್ದಕ್ಕೆ ಹೊಸತನ್ನು ಸೇರಿಸುವುದು ಕಲ್ಪನೆ. ಲೇಖಕನಿಗೆ ಇತರರ ಮನಸ್ಸಿನಲ್ಲಿ ನಡೆಯುವ ಕ್ರಿಯೆಯನ್ನು ಅನುಭವಿಸುವುದು ಸಾಧ್ಯವಾಗಬೇಕು. ಇದು ಸಂವೇದನಾಶೀಲತೆ. ಇಂತಹ ಸಂವೇದನೆ ಇರುವವನು ಕತೆಗಾರನಾಗುತ್ತಾನೆ ಎಂದು ಹೇಳಿದರು. ಕತೆಗಾರ್ತಿ ಪ್ರಜ್ಞಾ ಮಾರ್ಪಳ್ಳಿಯವರು ತಾವು ಬರೆದ ನಾನು ಮತ್ತು ಅವಳು ಕಥಾ ಸಂಕಲನದ ಕತೆಗಳು ಹುಟ್ಟಿಕೊಂಡ ರೀತಿಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಬಿಡುಗಡೆಯಾದ ಎನ್.ಭವಾನಿಶಂಕರ್‌ರವರ ಕತೆ ಬರೆಯುವುದು ಹೇಗೆ? ಎಂಬ ಕೃತಿಯು ಪ್ರತಿಯೊಂದು ಹಂತದಲ್ಲಿ ಕತೆಗಾರನಿಗೆ ವಿವರವಾದ ಮಾರ್ಗದರ್ಶನವನ್ನು ಯಾವ ರೀತಿಯಲ್ಲಿ ನೀಡುತ್ತದೆ ಎಂಬುದನ್ನು ಯುವ ಕತೆಗಾರ ಅಶ್ವಿನ್ ನೇರಿ ಕರ್ನೇಲಿಯೋರವರು ಪರಿಚಯಿಸಿದರು.
ಹಿರಿಯಡ್ಕದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯಾದ ಕು|| ಚಂದ್ರಿಕಾ ನಾಗರಾಜ್‌ರವರು ತಾನು ಬರೆದು ಪ್ರಕಟಿಸಿದ ಕಥಾ ಸಂಕಲನ ದೂರಾಗೋ ಮುನ್ನ ದ ಕತೆಗಳನ್ನು ತಾನು ಹೇಗೆ ಬರೆದೆ ಎಂದು ವಿಶ್ಲೇಷಿಸಿದರು. ಇದೇ ರೀತಿಯಲ್ಲಿ ಡಾ. ಪದ್ಮನಾಭ ಭಟ್ ಮತ್ತು ಎನ್.ಭವಾನಿಶಂಕರ್ ತಾವು ಕತೆಗಳನ್ನು ಬರೆದ ಬಗ್ಗೆ ಹೇಳಿದರು. ಮಂಗಳೂರು ವಿವಿ ವ್ಯಾಪ್ತಿಯ ೬೦ ವಿದ್ಯಾರ್ಥಿಗಳು ಈ ಕಮ್ಮಟದಲ್ಲಿ ಭಾಗವಹಿಸಿದ್ದರು.   


ಎನ್.ಭವಾನಿಶಂಕರ್‌ರವರ ಕತೆ ಬರೆಯುವುದು ಹೇಗೆ?-ಕೃತಿ ಬಿಡುಗಡೆ



            ಶಿರ್ವದ ಸಂತ ಮೇರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ಭವಾನಿಶಂಕರ್‌ರವರ ಕತೆ ಬರೆಯುವುದು ಹೇಗೆ? ಎಂಬ ಕೃತಿಯನ್ನು ಸಾಹಿತಿ ಡಾ. ನಾ.ಮೊಗಸಾಲೆ ಬಿಡುಗಡೆ ಮಾಡಿದರು.
            ಕೃತಿಯನ್ನು ಬಿಡುಗಡೆ ಮಾಡಿದ ಅವರು ಇದು ಕನ್ನಡಕ್ಕೆ ವಿಶಿಷ್ಟವಾದ ಅಪರೂಪದ ಕೃತಿ ಎಂದು ಹೇಳಿದರು. ಈ ಕೃತಿಯು ಸಣ್ಣ ಕತೆ, ಕಾದಂಬರಿ, ಮಕ್ಕಳ ಕತೆ, ಕಾರ್ಡಿನಲ್ಲಿ ಕತೆ, ಸಿನಿಮಾ ಕತೆಗಳನ್ನು ಬರೆಯುವ ವಿಧಾನವನ್ನು ಅತ್ಯಂತ ಸರಳವಾದ ಭಾಷೆಯಲ್ಲಿ ಪರಿಚಯಿಸುತ್ತದೆ. ಈ ಕೃತಿಯಲ್ಲಿ ಕತೆಯ ಭಾಗಗಳು, ಕತೆಯ ಆರಂಭ, ಕತೆಯಲ್ಲಿ ಕುತೂಹಲವನ್ನು ಕೆರಳಿಸಬೇಕಾದ ರೀತಿ, ನಿರೂಪಣಾ ಕ್ರಮ, ದೃಶ್ಯ ನಿರ್ಮಾಣ ಕ್ರಮ, ಪಾತ್ರಗಳ ವಿಧಗಳು ಇತ್ಯಾದಿ ವಿಷಯಗಳ ಬಗ್ಗೆ ಚೆನ್ನಾಗಿ ಬರೆದಿದ್ದಾರೆ. ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಉದಾಹರಣೆಗಳನ್ನು ನೀಡಿದ್ದಾರೆ. ಸನ್ನಿವೇಶ ಚಿತ್ರಣ, ಪಾತ್ರ ಚಿತ್ರಣ, ಕುತೂಹಲ ನಿರ್ಮಾಣ, ಆಲೋಚನೆ, ಕಥನ, ವರ್ಣನೆ, ಸಂಭಾಷಣೆಗಳಿಗೆ ಸಂಬಂಧಿಸಿದಂತೆ ಕನ್ನಡದ ಶ್ರೇಷ್ಠ ಕಾದಂಬರಿಗಳ ೨೦೦ಕ್ಕೂ ಹೆಚ್ಚು ಉದಾಹರಣೆಗಳನ್ನು ನೀಡಿದ್ದಾರೆ. ಈ ಕೃತಿ ಥಿಯರಿ ಮತ್ತು ಪ್ರಾಕ್ಟಿಕಲ್ ಎರಡೂ ವಿಷಯಗಳಿಗೆ ಸಂಬಂಧಿಸಿದಂತೆ ಸಶಕ್ತವಾಗಿದೆ ಎಂದರು.
            ಕಾಲೇಜಿನ ಪ್ರಾಂಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಓರ್ವ ಕನ್ನಡ ಪ್ರಾಧ್ಯಾಪಕರಾದ ಎನ್. ಭವಾನಿಶಂಕರ್‌ರವರು  ಕಂಪ್ಯೂಟರ್, ಇಂಟರ್‌ನೆಟ್, ಕಾರ್ ಡ್ರೈವಿಂಗ್, ಕಾನೂನು, ಮನಶ್ಯಾಸ್ತ್ರ, ವ್ಯಕ್ತಿತ್ವ ವಿಕಸನ, ಚುಟುಕು...ಈ ಯಾವುದೇ ವಿಷಯವನ್ನು  ಅತ್ಯಂತ ಸರಳವಾಗಿ ಬರೆಯುತ್ತಿರುವುದಕ್ಕಾಗಿ ಅಭಿನಂದಿಸಿದರು.
            ಸಭೆಯ ಅಧ್ಯಕ್ಷರಾದ ಸಂತ ಮೇರಿ ಸಂಸ್ಥೆಗಳ ಸಂಚಾಲಕರಾದ ವೆ.ರೆ.ಫಾ. ಸ್ಟಾನಿ ಟಾವ್ರೋರವರು ವಿಶಿಷ್ಟವಾದ ಪುಸ್ತಕವನ್ನು ಬರೆದಿರುವುದಕ್ಕಾಗಿ ಲೇಖಕರನ್ನು ಮತ್ತು ಕಾಲೇಜಿನ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವ ಪ್ರಾಂಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರನ್ನು ಅಭಿನಂದಿಸಿದರು.
            ಡಾ. ಪದ್ಮನಾಭ ಭಟ್‌ರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಗೋಪಾಲಕೃಷ್ಣ ಸಾಮಗರು ವಂದಿಸಿದರು. ಅಶ್ವಿನ್ ಕರ್ನೇಲಿಯೋರವರು ಕಾರ್ಯಕ್ರಮ ನಿರ್ವಹಿಸಿದರು.


ಮಂಗಳೂರು ಹೋಮ್ ಸ್ಟೇ ದಾಳಿ-ತಪ್ಪು ಯಾರದು?



            ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಹೋಂಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ವಿಚಾರ ಸಂಕಿರಣ ನಡೆಯಿತು. ಎನ್.ಭವಾನಿಶಂಕರ್‌ರವರು ಈ ವಿಚಾರ ಸಂಕಿರಣದ ನಿರ್ವಾಹಕರಾಗಿದ್ದರು. ಅವರು ಮಾತನಾಡುತ್ತ ಇತ್ತೀಚೆಗೆ ಮಂಗಳೂರಿನ ಪಡೀಲ್‌ನಲ್ಲಿ ನಡೆದ ದಾಳಿಯು ರಾಷ್ಟ್ರೀಯ ಮಟ್ಟದಲ್ಲಿ ಸುದ್ಧಿಯಾಗಿ, ಕನ್ನಡದ ಟೆಲಿವಾಹಿನಿಗಳಲ್ಲಿ ನಿರಂತರ ಚರ್ಚೆಗೆ ವಿಷಯವಾಯಿತು. ಆ ಮೂಲಕ ಇಂದಿನ ಯುವಕರು ಪಾಲಿಸಬೇಕಾದ ಸಭ್ಯತೆ, ಸಂಸ್ಕೃತಿಯ ಹೆಸರಿನಲ್ಲಿ ದಾಳಿ ಮಾಡುವ ಗೂಂಡಾಗಳು, ರಾಜಕೀಯ ಪಕ್ಷಗಳ ಓಟಿನ ನೆಲೆಯ ದೃಷ್ಟಿಕೋನ, ಟೆಲಿವಾಹಿನಿಗಳ ಆತುರ ಮತ್ತು ಆವೇಶಗಳೆಂಬ ಅನೇಕ ಸಂಗತಿಗಳ ಬಗ್ಗೆ ಮರುಯೋಚನೆಗೆ ಅವಕಾಶ ಕಲ್ಪಿಸಿತು ಎಂದರು.
            ಪ್ರೊ. ಸುಬ್ರಹ್ಮಣ್ಯರವರು ಮಾತನಾಡುತ್ತ ಪಡೀಲ್‌ನಲ್ಲಿ ಸಂಸ್ಕೃತಿಯ ರಕ್ಷರೆಂದು ಹೇಳಿಕೊಳ್ಳುತ್ತ ಬರ್ತ್ ಡೇ ಪಾರ್ಟಿಯ ಹೆಣ್ಣು ಮಕ್ಕಳ ಮೈಮೇಲೆಲ್ಲ ತಮಗೆ ಬೇಕಾದಂತೆ ಕೈಯಾಡಿಸಿ ತೀಟೆ ತೀರಿಸಿಕೊಂಡ ಅಧರ್ಮೀ ಗೂಂಡಾಗಳ ಕೃತ್ಯವನ್ನು ಖಂಡಿಸಿದರು. ಸರಕಾರ ಮತ್ತು ಪೋಲಿಸ್ ಇಲಾಖೆ ತನ್ನ ಕರ್ತವ್ಯವನ್ನು ಮರೆತಾಗ, ದುರ್ಬಲವಾದ ಕಾನೂನುಗಳಿರುವಾಗ ಇಂತಹ ಘಟನೆಗಳು ಘಟಿಸುತ್ತವೆ ಎಂದರು.  
            ಡಾ ಪದ್ಮನಾಭಭಟ್‌ರವರು ಮಾತನಾಡುತ್ತ ಜಾಗತೀಕರಣ ಕೊಡಮಾಡಿದ ಮೊಬೈಲ್ ತಂತ್ರಜ್ಞಾನ, ಪಶ್ಚಿಮ ದೇಶಗಳ ಸ್ವಚ್ಛಂದ ಜೀವನದ ಆದರ್ಶ, ಯುವಜನರ ಕೈತುಂಬ ಹರಿಯುವ ಹಣ, ಪಬ್, ಹೋಮ್ ಸ್ಟೇ ಇತ್ಯಾದಿ ಅನೈತಿಕತೆಯ ಮೂಲಕ ಹಣ ಸಂಪಾದನೆಯೇ ಮುಖ್ಯವೆನ್ನುವ ವ್ಯಾಪಾರೀ ವರ್ಗ, ಏಕ ಕಾಲಕ್ಕೆ ಅಮಿತ ಸುಖವನ್ನು ಪಡೆಯಬೇಕು ಎಂಬ ಯುವಜನತೆ-ದರಂತಗಳಿಗೆ ಕಾರಣವಾಗುತ್ತಿದೆ ಎಂದರು.  
            ಪ್ರೊ.ವಿನ್ಸೆಂಟ್ ಡಿಸೋಜರವರು ಭಾರತೀಯ ಸಂಸ್ಕೃತಿಯ ಬೇರುಗಳನ್ನು ವಿಮರ್ಶೆಯ ನಿಕಷದೊಂದಿಗೆ ಕ್ರಿಯಾಶೀಲಗೊಳಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರೆ, ವಿದ್ಯಾರ್ಥಿ ಪ್ರತಿನಿಧಿಯಾದ ಅಶ್ವಿನ್ ಕರ್ನೇಲಿಯೋರವರು ಯುವಜನರಿಗೆ ಇರಬೇಕಾದ ನೈತಿಕ ಹೊಣೆಗಾರಿಕೆ ಮತ್ತು ಸಾಮಾಜಿಕಬದ್ಧತೆಯ ಬಗ್ಗೆ ಹೇಳಿದರು. ವಿದ್ಯಾರ್ಥಿನಿಯರಾದ ಜೆನಿಫರ್ ಮೃದುಲ ಆಳ್ವ ಮತ್ತು ಮಿಶೆಲ್ ಆಳ್ವರವರು ಸ್ತ್ರೀಸ್ವಾತಂತ್ರ್ಯ ಎಂದರೆ ಸ್ವಚ್ಛಂದತೆ ಅಲ್ಲ, ಅರಿವು, ನೈತಿಕತೆ ಮತ್ತು ಹೊಣೆಗಾರಿಕೆಯ ಜೀವನ ಶೈಲಿ ಎಂದರು. ಸಭೆಯಲ್ಲಿ ನೈತಿಕ ಗೂಂಡಾಗಳ ವರ್ತನೆಯನ್ನು ಖಂಡಿಸಲಾಯಿತು.
            ಪ್ರಾಂಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಚರ್ಚೆಯ ಬಹುಮುಖ ಆಯಾಮದ ಬಗ್ಗೆ ಮೆಚ್ಚಿಕೆ ವ್ಯಕ್ತಪಡಿಸಿದರು. ಲಾಯಲ್ ಕೊರೆಯ ಸ್ವಾಗತಿಸಿದರು, ಫ್ಲಾವಿನ್ ಡಿಸೋಜ ವಂದಿಸಿದರು.  



ಮಲ್ಲಿಕಾ-೨೦೧೨ ವಾರ್ಷಿಕಾಂಕ ಬಿಡುಗಡೆ



            ಶಿರ್ವದ ಸಂತ ಮೇರಿ ಕಾಲೇಜಿನ ವರ್ಷದ ಮ್ಯಾಗಜಿನ್-ವಾರ್ಷಿಕಾಂಕ-೨೦೧೨ ಎಂಬ ಕೃತಿಯನ್ನು ಸಾಹಿತಿಗಳಾದ ಉದಯಕುಮಾರ ಹಬ್ಬುರವರು ಬಿಡುಗಡೆ ಮಾಡಿದರು.
            ೨೦೧೧ರ ವಾರ್ಷಿಕಾಂಕವು ಮಂಗಳೂರು ವಿವಿಯಲ್ಲಿ ದ್ವಿತೀಯ ಬಹುಮಾನವನ್ನು ಪಡೆದಿದ್ದು ಇದೀಗ ಬಂದಿರುವ ವಾರ್ಷಿಕಾಂಕ ೨೦೧೨ ಅಪೂರ್ವವಾದ ವೈವಿಧ್ಯತೆಯಿಂದ ಕೂಡಿದೆ ಎಂದರು. ವಿದ್ಯಾರ್ಥಿಯು ಕಾಪಿ ಹೊಡೆದು ಬರೆಯಲು ಅವಕಾಶವಿಲ್ಲದ ಹಾಗೆ ಈ ಕೃತಿಯು ರಚನೆಗೊಂಡಿದೆ. ಇದರಲ್ಲಿನ ಎಲ್ಲಾ ಲೇಖನಗಳು ವಿದ್ಯಾರ್ಥಿಯ ಸ್ವಾನುಭವ ಕಥನವಾಗಿದೆ. ವಿದ್ಯಾರ್ಥಿಗಳು ತಮ್ಮ ಊರಿನ ಸುತ್ತಲಿನ ವಿದ್ಯಮಾನದ ಬಗ್ಗೆ ಬರೆದಿದ್ದಾರೆ. ಅನೇಕ ವ್ಯಕ್ತಿಗಳ ಸಂದರ್ಶನ ಮಾಡಿದ್ದಾರೆ. ಇಲ್ಲಿಯ ಬರವಣಿಗೆಯು ಕಥನ ಶೈಲಿಯಿಂದ ಕೂಡಿದ್ದು ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ. ಒಬ್ಬ ವಿದ್ಯಾರ್ಥಿ ತನ್ನ ಬಡತನದ ಎಲ್ಲಾ ಆಯಾಮಗಳನ್ನು ಬರೆದು ಅದನ್ನು ಸವಾಲಾಗಿ ಸ್ವೀಕರಿಸುವ ಬಗ್ಗೆ ಬರೆದರೆ, ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೇ ಹೇರಲಾದ ಮದುವೆಯನ್ನು ಒಪ್ಪದೆ ತಾನು ವಿದ್ಯೆ ಕಲಿಯಬೇಕಾದ, ಕೆಲಸಕ್ಕೆ ಸೇರಬೇಕಾದ ಆಸೆಯನ್ನು ಗೆದ್ದುಕೊಂಡದ್ದರ ಬಗ್ಗೆ, ಇತರರು-ಮಡಿಕೇರಿಯ ಕೋಟೆ ಬೆಟ್ಟ ಹತ್ತಿದ್ದರ ಬಗ್ಗೆ, ಬೊಂಬಾಯಿಯ ಸ್ಲಂನಲ್ಲಿ ನಡೆದು ಹೋದ ಅನುಭವದ ಬಗ್ಗೆ, ಹುಡುಗಿಯೊಬ್ಬಳು ಹೈಸ್ಕೂಲಿನಲ್ಲಿ ಸೈಕಲ್‌ನ ಕಲಿಕೆ ತನ್ನ ಬದುಕಿನಲ್ಲಿ ತಂದ ಬದಲಾವಣೆಯ ಬಗ್ಗೆ, ದೋಣಿಯಲ್ಲಿನ ಪ್ರವಾಸ ಮತ್ತು ಕುದುರಿನ ಸಮಸ್ಯೆಗಳು, ಅಪಾರ್ಟ್‌ಮೆಂಟ್‌ನ ಬದುಕಿನ ರೀತಿ, ನಾಟಿಕೋಳಿಗಳ ಬದುಕಿನ ಶೈಲಿ, .....ಬಗ್ಗೆ ಬರೆದಿದ್ದಾರೆ. ಈ ಕೃತಿಯಲ್ಲಿ ...ಲೇಖನಗಳು ......ಕವನಗಳು ಇವೆ. ಇಡೀ ಕೃತಿಯ ಬೆರಳಚ್ಚು, ಪುಟ ವಿನ್ಯಾಸ, ಮುಖ ಪುಟ ವಿನ್ಯಾಸ ಮತ್ತು ಪುಟಗಳ ಜೋಡಣೆಯನ್ನು ಕಾಲೇಜಿನ ಸಿಬ್ಬಂದಿಗಳು ಮತ್ತು ಶಿಕ್ಷಕರು ಮಾಡಿದ್ದಾರೆ. ಪ್ರತಿಯೊಂದು ಲೇಖನಕ್ಕೂ ಅರ್ಥಪೂರ್ಣವಾದ ಫೋಟೋಗಳನ್ನು ಬಳಸಲಾಗಿದೆ ಎಂದರು.           
            ಕಾಲೇಜಿನ ಪ್ರಾಂಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಮಾತನಾಡುತ್ತ ಇಡೀ ಕೃತಿ ಕಾಲೇಜಿನಲ್ಲಿಯೇ ತಯಾರಾಗಿದ್ದು ಮುದ್ರಣ ಮಾತ್ರ ಹೊರಗೆ ನಡೆದಿದೆ ಎಂದರು. ಈ ಕೃತಿ ರಚನೆಯ ಹಿಂದೆ ಕನ್ನಡ ಪ್ರಾಧ್ಯಾಪಕರಾದ ಎನ್.ಭವಾನಿಶಂಕರ್ ಮತ್ತು ಇತರ ಸಂಪಾದಕರ ಪರಿಶ್ರಮವನ್ನು ಶ್ಲಾಘಿಸಿದರು. 
            ಡಾ. ಪದ್ಮನಾಭ ಭಟ್‌ರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಎನ್.ಭವಾನಿಶಂಕರ್ ಶ್ಲಾಘಿಸಿದರು. ಪ್ರೊ. ಗೋಪಾಲಕೃಷ್ಣ ಸಾಮಗ ವಂದಿಸಿದರು. ಶ್ವಿನ್ ಲಾರೆನ್ಸ್ ಕಾರ್ಯಕ್ರಮ ನಿರ್ವಹಿಸಿದರು.

No comments:

Post a Comment