Tuesday, August 3, 2010

ಕೃತಿ ಬಿಡುಗಡೆ ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ


ಕಂಪ್ಯೂಟರ್ ಬಗ್ಗೆ ಏನೂ ತಿಳಿಯದಿರುವವರನ್ನು ಕುರಿತಂತೆ ಬರೆದ ಕೃತಿಯೆ ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ. ಇಷ್ಟು ಮಾತ್ರವಲ್ಲದೆ ದಿನ ನಿತ್ಯದ ಬಳಕೆಗಾಗಿ ಬೇಕಾಗುವ ವಿಷಯಗಳನ್ನು ಇಲ್ಲಿ ಹೇಳಲಾಗಿದೆ. ಈ ಕೃತಿಯಲ್ಲಿ ಕಂಪ್ಯೂಟರ್‌ನ ಭಾಗಗಳ ಪರಿಚಯ, ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್, ಕಾಪಿ-ಕಟ್-ಪೇಸ್ಟ್, ಕಂಪ್ಯೂಟರ್‌ನ ಜೊತೆಗೆ ಸ್ಕ್ಯಾನ್ನರ್, ಪೆನ್ ಡ್ರೈವ್, ಮೊಬೈಲ್ ಪೋನ್, ವೀಡಿಯೋ ಕ್ಯಾಮರಾ, ಜೆರಾಕ್ಸ್ ಮೆಶೀನ್‌ಗಳನ್ನು ಬಳಸುವುದು, ಇಮೈಲ್, ಇಂಟರ್‌ನೆಟ್, ಸೀಡಿ ಡೀವಿಡಿ ಬರ್ನಿಂಗ್, ಸಾಫ್ಟ್‌ವೇರ್ ಇನ್‌ಸ್ಟಾಲ್ಲೇಶನ್, ಪವರ್ ಪಾಯಿಂಟ್ ಪ್ರೆಸೆಂಟೇಶನ್, ಪೈಂಟಿಂಗ್ ಇತ್ಯಾದಿಗಳನ್ನು ೨೦೦ಕ್ಕೂ ಹೆಚ್ಚು ಚಿತ್ರಗಳನ್ನು ಬಳಸಿ ವಿವರಿಸಲಾಗಿದೆ.
ವಿಳಾಸ: ಎನ್. ಭವಾನಿಶಂಕರ್, ಕನ್ನಡ ಪ್ರಾಧ್ಯಾಪಕರು, ಸಂತ ಮೇರಿ ಕಾಲೇಜು, ಶಿರ್ವ, ಜಿಲ್ಲೆ, ೫೭೪೧೧೬ ಇ ಅಂಚೆ: bsshirva@gmail.com , ಫೋನ್: 9242 232323
**********
ಗ್ರಾಮಲೋಕ

ಶಿರ್ವದ ಸೈಂಟ್ ಮೆರೀಸ್ ಕಾಲೇಜಿನ ಕನ್ನಡ ವಿದ್ಯಾರ್ಥಿಗಳು ಶಿರ್ವದ ಸುತ್ತಮುತ್ತಲಿನ ಗ್ರಾಮದ ಜನರನ್ನು ಸಂದರ್ಶನ ಮಾಡಿ ಬರೆದ ಲೇಖನಗಳು "ಗ್ರಾಮ ಲೋಕ" ಎಂಬ ಹೆಸರಿನ ಪುಸ್ತಕವಾಗಿ ಬಿಡುಗಡೆಯಾಗುತ್ತಿದೆ. ಇಲ್ಲಿ ಹಳ್ಳಿಯ ಜೀವನದ ನಾನಾ ಮುಖಗಳು ಅನಾವರಣಗೊಂಡಿವೆ. ಕನ್ನಡದ ನನ್ನ ವಿದ್ಯಾರ್ಥಿಗಳು ನಾನು ಶಿರ್ವದ ಸೈಂಟ್ ಮೆರೀಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿದ್ದೇನೆ. ನನ್ನ ಕನ್ನಡ ಪಾಠ ವಿದ್ಯಾರ್ಥಿಗಳಿಗೆ ಇಷ್ಟವಿರಬಹುದು . ಕನ್ನಡ ಪಾಠದ ಜೊತೆಗೆ ಸೇರಿಕೊಂಡಿರುವ ಒಂದು ಮುಖ್ಯ ಸಂಗತಿ ಎಂದರೆ ಹಾಸ್ಯ. ನಾನು ಪಾಠ ಮಾಡುತ್ತ ಪಾಠವನ್ನು ಅರ್ಥವಾಗಿಸಲು ವಿದ್ಯಾರ್ಥಿಗಳನ್ನೆ ಉದಾಹರಣೆಯಾಗಿ ಬಳಸಿಕೊಳ್ಳುತ್ತೇನೆ. ಅಂದರೆ ವಿದ್ಯಾರ್ಥಿಗಳು ನನಗೆ ತಮಾಷೆಯ ವಸ್ತು. ಹಾಗೆ ನನಗೆ ನಾನೂ ಕೂಡ ತಮಾಷೆಯ ವಸ್ತು. ಅಂತಹ ನೆನಪುಗಳ ಜೊತೆಗೆ ಇತರ ನೆನಪುಗಳನ್ನು ಹಂಚಿಕೊಳ್ಳುವ ಪುಟ ಇದು. ಇಲ್ಲಿ ಎಲ್ಲ ತಮಾಷೆಗಾಗಿ


ಮಮತಾ
ವಿದ್ಯಾರ್ಥಿನಿ ಆಗಿದ್ದದ್ದು ೨೦೦೮-೨೦೧೦. ಪ್ರಥಮ ಬಿ‌ಎ ಮೊದಲ ಪೀರಿಯಡ್‌ನಲ್ಲಿ ನಾನು ಮಾತನಾಡುತ್ತ ಯಾರ ಮನೆಯಲ್ಲಿ ದನ ಇದೆ ಎಂದಾಗ ಮಮತ ನಿಂತಳು. ಆಕರ್ಷಕ ಕಣ್ಣಿನ ಹುಡುಗಿ. ಕರೆದ ಹಾಲನ್ನು ಯಾರಿಗೆಲ್ಲ ಕೊಡುತ್ತಾರೆಂದು ಕೇಳಿದೆ. ತಿಳಿಸಿದಳು. ಉಳಿಯುತ್ತದೆಯೆ ಎಂದೆ. ಹೌದು ಎಂದಳು. ನನಗೆ ಬೇಕು, ದಿನಾಲು ಕಾಲೇಜಿಗೆ ತರುತ್ತೀಯಾ ಎಂದೆ. ಆಯ್ತು ಎಂದಳು. ನಾನು ಮನದೊಳಗೆ ನಕ್ಕೆ. ಮಕ್ಕಳ ಈ ಮುಗ್ದತೆಯೆ ನನಗೆ ಇಷ್ಟವಾಗುವುದು. ಅನಂತರ ಆ ಬಗ್ಗೆ ಮಾತನಾಡಲಿಲ್ಲ. ಮುಂದೊಂದು ದಿನ ಕೇಳಿದೆ. ನಾವಿಬ್ಬರು ಹಾಲಿನ ವ್ಯಾಪರ ಮಾಡೋಣವೆ ಅಂತ. ಎರಡು ವರ್ಷಗಳ ತನಕ ಕ್ಲಾಸಿನಲ್ಲಿ ಈ ಕತೆ ಬೆಳೆಯುತ್ತಾ ಹೋಯಿತು. ನಾವು ಕಾಪು ಊರಿನಲ್ಲಿ ತಲೆಯ ಮೇಲೆ ಕೊಡಪಾನ ಇಟ್ಟುಕೊಂಡು ಹಾಲು ಹಾಲು ಎಂದು ಹಾಲು ಮಾರುತ್ತೇವೆ. ನಾನು ಮಮತಳ ಅಸಿಸ್ಟೆಂಟ್. ಮಮತ ಹಾಲು ಮರುವುದು ಜನರಿಲ್ಲದ ಹೈವೆ ಬದಿಯಲ್ಲಿ. ನಾನು ಮಾರುವುದು ಕಾಪು ಪೇಟೆಯಲ್ಲಿ. ನಾನು ಸಂಜೆ ಅವಳಿಗೆ ಹಣ ಒಪ್ಪಿಸಬೇಕು. ಹೀಗೆ ವ್ಯಾಪಾರ ಬೆಳೆಯಿತು. ಹಾಲು ಮಾರಲೆಂದು ಮಮತ ಮಾರುತಿ ಓಮ್ನಿ ತಗೊಂಡಳು. ನಾನು ಮಾತ್ರ ಕಾಪು ಪೇಟೆಯಲ್ಲಿಯೆ ಹಾಲು ಮಾರಬೇಕಾಯಿತು. ಮಮತಳ ಹಾಲಿನ ಇಂಡಸ್ಟ್ರಿ ಬೆಳೆಯಿತು. ಆ ಇಂಡಸ್ಟ್ರಿಯಲ್ಲಿ ಹಾಲಿನ ಮಾತ್ರೆಗಳು ತಯಾರಾಗುತ್ತವೆ. ಅವು ಎಲ್ಲಾ ಅಂಗಡಿಗಳಲ್ಲೂ ದೊರೆಯುತ್ತವೆ. ನೀರಿಗೆ ಒಂದು ಮಾತ್ರೆ ಹಾಕಿದರೆ ಮೂರು ಲೀಟರ್ ಹಾಲು ತಯಾರಾಗುತ್ತದೆ. ಈಗ ನಾನು ಮಮತ ಮಿಲ್ಕ್ ಇಂಡಸ್ಟ್ರೀಸ್‌ನಲ್ಲಿ ಅಕೌಂಟೆಂಟ್ ಆಗಿದ್ದೇನೆ. ಮಮತಾ ತಮಾಷೆಯಾಗಿ ತಕೋ. ಈ ಹಾಸ್ಯ ಕ್ಲಾಸಿನಲ್ಲಿ ವ್ಯಕ್ತವಾಗುತ್ತಿದ್ದಂತೆಲ್ಲಾ ಒಂದು ಕ್ಷಣ ಮಾತ್ರ ಮಮತಳ ಮುಖದಲ್ಲಿ ಸಿಟ್ಟು ಕಾಣುತ್ತಿತ್ತು. ಉಳಿದಂತೆ ಶಾಂತವಾದ ನಗುಮುಖ. ಥ್ಯಾಂಕ್ಯೂ ಮಮತಾ.



ಸೌಮ್ಯ ಕುಮಾರಿ
ವಳು ನನ್ನ ವಿದ್ಯಾರ್ಥಿನಿ ಆಗಿದ್ದದ್ದು ೨೦೦೮-೨೦೧೦. ಸಪೂರ ಉದ್ದದ ಹುಡುಗಿ. ಅಚ್ಚುಕಟ್ಟಾದ ಡ್ರೆಸ್. ನಗು ಮುಖ. ಸ್ವಲ್ಪ ಹೈಹೀಲ್ಡ್ ಚಪ್ಪಲ್. ನನ್ನ ಪ್ರಕಾರ ಇವಳು ಕ್ಲಾಸಿಗೆ ಬರುತ್ತಿದ್ದುದು ಅಮೆರಿಕಾದಿಂದ. ಚಿಕ್ಕ ವಿಮಾನದಲ್ಲಿ. ದಿನಾ ಬೆಳಿಗ್ಗೆ ಅಮೆರಿಕಾದಿಂದ ಹೊರಟು ಕಾಲೇಜಿಗೆ ಬಂದು ಅನಂತರ ಕ್ಲಾಸು ಮುಗಿಸಿ ಸಂಜೆ ಅಮೆರಿಕಾಕ್ಕೆ ಹೋಗುತ್ತಾಳೆ. ಪ್ರಯಾಣದ ಅವಧಿ ಒಂದು ಗಂಟೆ. ಅವಳು ಕೆಲಲವೊಮ್ಮೆ ಆಫ್ರಿಕಾದ ಮೇಲಿಂದ ಬರುತ್ತಾಳೆ. ಇನ್ನು ಕೆಲವೊಮ್ಮೆ ಇಂಗ್ಲೆಂಡ್ ದಾರಿಯಾಗಿ. ಸಂಜೆ ಕ್ಲಾಸು ಬೇಗ ಬಿಟ್ಟರೆ ಭೂಮಿಗೆ ಒಂದು ಸುತ್ತು ಬಂದು ಅಮೆರಿಕಾ ತಲಪುತ್ತಾಳೆ. ಆ ಚಿಕ್ಕ ವಿಮಾನ ಇಳಿಯುತ್ತಿದ್ದುದು ನಮ್ಮ ಕಾಲೇಜಿನ ಟೆರೇಸ್ ಮೇಲೆ. ಕೆಲವೊಮ್ಮೆ ಬರುತ್ತಾ ಪಡುಬಿದ್ರಿ, ಕಾಪು, ಕಟಪಾಡಿಯಲ್ಲಿ ಯಾರಾದರು ಗೆಳತಿಯರು ಕಂಡರೆ ಕರೆದುಕೊಂಡು ಬರುತ್ತಾರೆ. ಈ ತೆಲ್ಲ ತಮಾಷೆ ಮಾಡುತ್ತಿದ್ದರು ಅವಳದು ನಗುತ್ತಿರುವ ಮುಖ. ಒಮ್ಮೆಯೂ ಅವಳಿಗೆ ಬೇಸರವಾದದ್ದು ಇಲ್ಲ. ಹೀಗಿರುವಾಗ ಅವಳ ವ್ಯಾನಿಟಿ ಬ್ಯಾಗ್ ಬದಲಾಯಿತು. ಆ ಬಗ್ಗೆ ತಮಾಷೆ ಸುರು ಮಾಡಿದೆ. ಆ ಬ್ಯಾಗ್ ಕಪ್ಪ ಬಿಳಿ ಬಣ್ಣದು. ಅದರ ಮೈ ಬೆಕ್ಕಿನ ಬಣ್ಣದ ರೋಮದ ಥರ. ಅದಕ್ಕೆ ನಾನು ಪುಚ್ಚೆ (ಪುಚ್ಚೆ=ತುಳು, ಕನ್ನಡ=ಬೆಕ್ಕು) ಬ್ಯಾಗ್ ಅಂತ ಕರೆದೆ. ಕರೆದ ದಿನ ನನಗೆ ಭಯ. ಎಲ್ಲಿ ಮರುದಿನದಿಂದ ತರುವುದಿಲ್ಲವೋ ಅಂತ. ಅವಳು ತರುವುದನ್ನು ನಿಲ್ಲಿಸಲಿಲ್ಲ. ನಾನು ತಮಾಷೆ ಮಾಡುವುದನ್ನು ನಿಲ್ಲಿಸಲಿಲ್ಲ. ಅವಳ ಮುಖ ಎಂದೂ ಬಾಡಲಿಲ್ಲ. ಥ್ಯಾಂಕ್ಯೂ ಸೌಮ್ಯ.

ಸುಭಾಷಿಣಿ
೨೦೧೦-೨೦೧೨ರ ಅವಧಿಯ ಹುಡುಗಿ. ಮೊದಲ ಪೀರಿಯಡ್. ಆರಂಭಿಸಬೇಕಾಗಿದ್ದ ಪಾಠ ಕಥನಕಲೆ: ವಸ್ತು ಮತ್ತು ತಂತ್ರ. ಪಾಠದ ವಿಷಯ ಕತೆ ಎಂದರೇನು? ಬರೆಯುವುದು ಹೇಗೆ? ಮುಂದಿನ ಸಾಲಿನಲ್ಲಿ ಕುಳಿತ ಹುಡುಗಿ ಸುಭಾಷಿಣಿ. ಸುಭಾಷಿಣಿ ಸ್ಟಾಫ್ ರೂಮಿನಲ್ಲಿ ಕುಳಿತಿದ್ದಾಳೆ. ಲೆಕ್ಚರರ್. ಮೊದಲ ದಿನದ ಕನ್ನಡ ಪಾಠ. ಕಿಟಕಿಯಿಂದ ಹೊರಗೆ ನೋಡುತ್ತಿದ್ದವಳು ನಿಟ್ಟುಸಿರು ಬಿಡುತ್ತಾಳೆ. ಕ್ಲಾಸಿಗೆ ಬಂದಳು. ಪಾಠ ಆರಂಭಿಸಿದಳು. ಹಿಂದಿನ ಸಾಲಿನ ಇಬ್ಬರು ಹುಡುಗಿಯರು ಮಾತನಾಡುತ್ತಿದ್ದಾರೆ. ಒಬ್ಬಳನ್ನು ನಿಲ್ಲಿಸಿ ಬೈದಳು. ಹೊರಗೆ ಹೋಗು ಎಂದಳು. ಹೋಗಲಿಲ್ಲ. ಕ್ಲಾಸಿನಲ್ಲಿ ಭಾರೀ ಗಲಾಟೆ. ತರಗತಿ ಮುಗಿಯಿತು. ಸುಭಾಷಿಣಿ ಸ್ಟಾಫಿನಲ್ಲಿ ಕುಳಿತಿದ್ದಾಳೆ. ಅತ್ಯಂತ ಬೇಸರ. ನಾನು ಪಾಠ ಮಾಡಲಾರೆ. ರಾಜಿನಾಮೆ ಪತ್ರ ಬರೆಯುತ್ತಾ ಕುಳಿತಳು. ಒಂದು ಧ್ವನಿ ಕೇಳಿಸಿತು. ಮೇಡಮ್. ನೋಡಿದಳು. ಅದೇ ಹುಡುಗಿ. ಕ್ಷಮಿಸಿ ಎಂದು ಜೋರಾಗಿ ಅತ್ತಳು. ಸುಭಾಷಿಣಿ ಭಾವುಕಳಾದಳು. ಹುಡುಗಿಯನ್ನು ಅಪ್ಪಿಕೊಂಡಳು. ನಿಂತ ಕಾಲಿನಲ್ಲಿ ಈ ಕತೆಯನ್ನು ಹೇಳುತ್ತ ಅಭಿನಯಿಸುತ್ತಾ ಹೋದೆ. ಹೇಳಿದೆ. ಸುಭಾಷಿಣಿ ನಿನ್ನ ಬಗ್ಗೆ ಇಷ್ಟೊಂದು ಒಳ್ಳೆಯ ಕತೆ ಹೇಳಿದ್ದೇನೆ. ನನಗೆ ಶಾಲು ಹೊದೆಸಿ ಗಿಫ್ಟ್ ಕೊಟ್ಟು ಸನ್ಮಾನ ಮಾಡಬೇಕಲ್ಲ ಅಂದೆ. ಗಂಟೆ ಹೊಡೆಯಿತು. ಮರುದಿನ ಕ್ಲಾಸಿಗೆ ಹೋದರೆ ಸುಭಾಷಿಣಿಯ ಕೈಯಲ್ಲಿ ದೊಡ್ಡ ಬಾಕ್ಸ್ ಇತ್ತು. ಗಿಫ್ಟ್. ನಾನು ವಿದ್ಯಾರ್ಥಿಗಳಿಗೆ ತಮಾಷೆ ಮಾಡುತ್ತೇನೆ. ಚಾಲೆಂಜ್ ಮಾಡುತ್ತೇನೆ. ಅದರಲ್ಲಿ ಐವತ್ತು ಶೇಕಡಾ ಮಂದಿ ಚಾಕಲೇಟ್ ಕೊಡುತ್ತಾರೆ. ಉಳಿದವರು ಕೊಡುವುದೇ ಇಲ್ಲ. ಅದೇ ನನಗೆ ಸಂತೋಷ. ಇಡೀ ವರ್ಷ ಅದನ್ನು ಕೇಳುತ್ತಿರಬಹುದಲ್ಲ. ಕಿಚಾಯಿಸುತ್ತಿರಬಹುದಲ್ಲ. ಇಷ್ಟು ದೊಡ್ಡ ಗಿಫ್ಟ್. ಇದೇ ಮೊದಲ ಬಾರಿ. ಸಂತೋಷದ ಬೇಸರವಾಯಿತು.




ವೀಡಿಯೋ ಕವನ ಎಂದರೆ-ಕೃತಿ ಬಿಡುಗಡೆ


ತಿದಿಯ ಹಾಡು: ಕನ್ನಡದ ಮೊದಲ ವೀಡಿಯೋ ಕವನ ಸಂಕಲನ ಬಿಡುಗಡೆ
ವೀಡಿಯೋ ಕವನಗಳು ರಾಜ್ಯ ಮಟ್ಟದ ವಿಚಾರ ಸಂಕಿರಣ

ಅಕ್ಷರ ರೂಪದಲ್ಲಿ ಸಂಕ್ಷಿಪ್ತವಾಗಿದ್ದು, ಸಂಕೇತ, ಪ್ರತಿಮೆ, ಗೀತ ಗುಣ, ಜೀವನಾನುಭವ, ಮೌಲ್ಯಪ್ರತಿಪಾದನೆ, ಕಿರಿದರಲ್ಲಿ ಹಿರಿಯ ಅರ್ಥ ಇದ್ದರೆ ಅದು ಕವನ. ಕೇವಲ ವೀಡಿಯೋ ಕ್ಯಾಮರಾದ ದೃಶ್ಯ, ಶಬ್ದ, ಮತ್ತು ಸಂಗೀತಗಳು ಮೇಲಿನ ಸೂತ್ರದ ಪ್ರಕಾರ ಸೇರಿಕೊಂಡಿದ್ದರೆ ಅದು ವೀಡಿಯೋ ಕವನ. ಇಂತಹ ೫ ರಿಂದ ೨೦ ನಿಮಿಷಗಳ ಅವಧಿಯ ಸಿನಿಮಾಗಳು ವೀಡಿಯೋ ಕವನಗಳು. ಇದುವರೆಗೆ ಇಂತಹ ೬೦ ವೀಡಿಯೋ ಕವನಗಳನ್ನು ಎನ್. ಭವಾನಿಶಂಕರ್‌ರವರು ನಿರ್ಮಿಸಿದ್ದಾರೆ. ಈ ವೀಡಿಯೋ ಕವನದ ಆರಂಭದಲ್ಲಿ ಮುಂದಿನ ವಿಷಯಕ್ಕೆ ಒಂದು ದಿಕ್ಕು ತೋರಿಸುವ ಸಲುವಾಗಿ ಸರಳವಾದ ಕನ್ನಡ ಕವನವೊಂದು ಬರುತ್ತದೆ. ಈ ಕನ್ನಡ ಕವನದ ಸೂಕ್ಷ್ಮ ಸಂಗತಿಗಳು ಮುಂದಿನ ವೀಡಿಯೋ ಕವನದಲ್ಲಿ ಕಾಣಿಸಿಕೊಳ್ಳುತ್ತವೆ. ಅವರ ಮೊದಲ ವೀಡಿಯೋ ಕವನ ೨೦೦೪ರಲ್ಲಿ ನಿರ್ಮಿತವಾದ ಚಪ್ಪಲಿಗಳು. ಇಂಟರ್‌ನೆಟ್‌ನಲ್ಲಿ ಜಾಲಾಡಿದಾಗ ಭಾರತದಲ್ಲಿ ವೀಡಿಯೋ ಕವನಗಳ ಇರುವಿಕೆಯ ಕುರಿತ ಮಾಹಿತಿ ಸಿಗುವುದಿಲ್ಲ. ಆದರೆ ಪಾಶ್ಚಾತ್ಯ ದೇಶಗಳಲ್ಲಿ ಅವು. Videopoetry, Video-visual poetry, Poetronica, Poetry video, Media poetry, Cine Poetry, Digital poetry ಎಂಬೆಲ್ಲ ಹೆಸರುಗಳಲ್ಲಿ ವೈವಿಧ್ಯಮಯವಾಗಿ ಬೆಳೆದಿದೆ. ಎನ್. ಭವಾನಿಶಂಕರ್‌ರವರ ವೀಡಿಯೋ ಕವನಗಳನ್ನು ಕುರಿತಂತೆ ಕನ್ನಡ ವೀಡಿಯೋ ಕವನಗಳು-ಒಂದು ಹೊಸ ನಿರ್ಮಿತಿ ಎಂಬ ಯುಜಿಸಿ ಪ್ರಾಯೋಜಿತ ರಾಜ್ಯಮಟ್ಟದ ಸಮ್ಮೇಳನ ಶಿರ್ವದ ಸಂತ ಮೇರಿ ಕಾಲೇಜಿನಲ್ಲಿ ಆಗಸ್ಟ್ ೨೭-೨೮ ರಂದು ನಡೆಯಲಿದೆ. ಈ ಸಮ್ಮೇಳನವನ್ನು ಡಾ. ಪಾದೇಕಲ್ಲು ವಿಷ್ಣು ಭಟ್‌ರವರು ಉದ್ಘಾಟಿಸಿ ಪ್ರತಿಯೊಂದು ಗೋಷ್ಠಿಯನ್ನು ಕುರಿತಂತೆ ಸಮೀಕ್ಷೆಯ ಮಾತುಗಳನ್ನು ಆಡಲಿದ್ದಾರೆ. ಈ ವಿಚಾರಗೋಷ್ಠಿಯಲ್ಲಿ ಮಂಡಿತವಾಗುವ ವೀಡಿಯೋ ಕವನಗಳನ್ನು ಕುರಿತಂತೆ-ಡಾ. ಸತ್ಯನಾರಾಯಣ ಮಲ್ಲಿಪಟ್ಟಣ, ಪ್ರೊ. ಹಯವದನ ಉಪಾಧ್ಯ, ಡಾ. ವರದರಾಜ ಚಂದ್ರಗಿರಿ, ಪ್ರೊ. ರೇಖಾ ವಿ ಬನ್ನಾಡಿ, ಡಾ. ನಿಕೇತನ, ಡಾ. ಮಹಾಲಿಂಗ ಭಟ್ ಹಾಗೂ ಪ್ರೊ. ಶ್ರೀಧರಮೂರ್ತಿಯವರು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಎನ್. ಭವಾನಿಶಂಕರ್‌ರವರ ತಿದಿಯ ಹಾಡು ಎಂಬ ಕನ್ನಡದ ಮೊದಲ ವೀಡಿಯೋ ಕವನ ಸಂಕಲನದ ಡಿವಿಡಿಯನ್ನು ಸಂತ ಮೇರಿ ಸಂಸ್ಥೆಗಳ ಸಂಚಾಲಕರಾದ ರೆ. ಫಾ. ರಿಚರ್ಡ್ ಕುವೆಲ್ಲೊರವರು ಬಿಡುಗಡೆ ಮಾಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ. ಜಾನ್ ಕ್ಲಾರೆನ್ಸ್ ಮಿರಾಂಡ ಹಾಗೂ ಪ್ರೊ. ರೊನಾಲ್ಡ್ ಜೋಸೆಫ್ ಮೊರಾಸ್‌ರವರು ಉಪಸ್ಥಿತರಿರುತ್ತಾರೆ. ಎನ್. ಭವಾನಿಶಂಕರ್‌ರವರು ತಾವು ನಿರ್ಮಿಸುವ ಟೆಲಿ ಚಿತ್ರಗಳ ವೀಡಿಯೋ ಕ್ಯಾಮರಾ ನಿರ್ವಹಣೆ, ಕಂಪ್ಯೂಟರ್ ಎಡಿಟಿಂಗ್, ಗ್ರಾಫಿಕ್ಸ್, ಸ್ಕ್ರಿಪ್ಟ್, ನಿರ್ದೇಶನ ಮತ್ತು ಸಂಗೀತವನ್ನು ತಮ್ಮ ಕಂಪ್ಯೂಟರ್ ಮೂಲಕ ತಾವೇ ನಿರ್ಮಿಸುತ್ತಾರೆ. ಕವಿ ಏಕಾಂಗಿ ಹೇಗೋ ಹಾಗೆ. ಎನ್. ಭವಾನಿಶಂಕರ್‌ರವರು ಈ ೬೦ ವೀಡಿಯೋ ಕವನಗಳಲ್ಲದೆ ವ್ಯಕ್ತಿತ್ವ ವಿಕಸನ, ಕಂಪ್ಯೂಟರ್, ಕಲೆ, ಸಂಸ್ಕೃತಿ, ಪ್ರವೇಶ ಪರೀಕ್ಷೆಗಳು, ವಾಣಿಜ್ಯ ವಿಷಯ ಇತ್ಯಾದಿಗಳನ್ನು ಕುರಿತಂತೆ ೧೨೦ ಶೈಕ್ಷಣಿಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಮೂಲಕ ನಾಲ್ಕು ವರ್ಷಗಳಿಂದ ಬೇರೆ ಬೇರೆ ವಿಷಯಗಳನ್ನು ಕುರಿತಂತೆ ತರಬೇತಿ ನೀಡುತ್ತಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ವೀಡಿಯೋ ಕವನ ಎಂಬ ಹೊಸ ಪ್ರಕಾರದ ನಿರ್ಮಾಣಕ್ಕೆ ಅವರು ಚಾಲನೆ ನೀಡಿದ್ದಾರೆ.

4 comments:

  1. ಭವಾನಿ ಶಂಕರ್, ಇದು ನಿಮ್ಮ ಮೊದಲೇನೇ ಪೋಸ್ಟು. ಚೆನ್ನಾಗಿದೆ. ನಿಮ್ಮ ಪಾಠ ಮಾಡುವ ಸ್ಟೈಲ್ ಸಖತ್ತಾಗಿದೆ. ಬರೀ ಹುಡುಗೀರ ಬಗ್ಗೇನೆ ಬರ್ದಿದ್ದೀರ? :-)

    ಕನ್ನಡಕಾವ್ಯ.ಬ್ಲಾಗ್ಸ್ಪಾತ್.ಕಾಮ್
    www.kannadakaavya.blogspot.com

    ReplyDelete
  2. ಬ್ಲಾಗ್ ಗೆ ಫೇಸ್ಟ್ ಮಾಡಲು ನುಡಿಯಿಂದ ಕನ್ವರ್ಟ್ ಮಾಡುವುದು ಹೇಗೆ?

    ReplyDelete
  3. ನಿಮ್ಮ ಪುಸ್ತಕ 'ಕನ್ನಡ ಈ ಲೋಕ ' ತುಂಬಾ ಚೆನ್ನಾಗಿದೆ. ನಿಮ್ಮಿಂದ ಕನ್ನಡ ಪ್ರಪಂಚ ಶ್ರೀಮಂತ ವಾಯಿತು.ಇನ್ನು ಹೆಚ್ಚಿಗೆ ಬರೆಯಿರಿ.
    ನಾನು ನುಡಿಯಲ್ಲಿ ಲೇಖನವನ್ನು ಬರೆದಿದ್ದೇನೆ. ಅದನ್ನು ಬ್ಲಾಗ್ಗೆ ಕನ್ನಡ ಬರುವಂತೆ (ಪೇಸ್ಟ್)ಮಾಡುವುದು ಹೇಗೆ?
    ದಯವಿಟ್ಟು ತಿಳಿಸಿ.
    ನಿಮ್ಮ ಆತ್ಮೀಯ,
    ವಿದ್ಯಾಧರ.ಸಿ.ಎ.

    ReplyDelete
  4. ನನಗೆ ಈ ಬ್ಲಾಗಿ೦ದ ತು೦ಬಾ ಉಪಯೋಗವಾಗಿದೆ.ಮುಖ್ಯವಾಗಿ ಇ೦ಗ್ಲಿಷ್ಮ ಅಕ್ಷರಗಳ ಮುಖಾ೦ತರ ಕನ್ನಡವನ್ನು ಟ್ಯಪಿಸುವುದು. ನಾನು ಯಾವುದೇ ಸ೦ದರ್ಭದಲ್ಲಿ ಕನ್ನಡವನ್ನು ಟ್ಯಪಿಸಬೇಕಾದರೆ ಈ ಬ್ಲಾಗನ್ನು ಉಪಯೋಗಿಸ್ತಾ ಇದ್ದೀನಿ.ನಿಮಗೆ ತು೦ಬಾ ಧನ್ಯವಾದಗಲು.

    ReplyDelete