Saturday, February 11, 2012


ಎನ್.ಭವಾನಿಶಂಕರ್‌ರವರ ನಗಿಸುವ ಕವನಗಳು-ಕೃತಿ ಬಿಡುಗಡೆ

          ಶಿರ್ವದ ಸಂತ ಮೇರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ಭವಾನಿಶಂಕರ್‌ರವರ ನಗಿಸುವ ಕವನಗಳು ಎಂಬ ಕೃತಿಯನ್ನು ಉಡುಪಿಯ ಹಾಸ್ಯ ಬರಹಗಾರರಾದ ಶ್ರೀ ಎಚ್. ಗೋಪಾಲ ಭಟ್ಟರು ಬಿಡುಗಡೆ ಮಾಡಿದರು.
          ಕೃತಿಯನ್ನು ಬಿಡುಗಡೆ ಮಾಡಿದ ಅವರು ಇಲ್ಲಿಯ ಹನಿಗವನಗಳು ದುಂಡಿರಾಜರ ಕವನಗಳಂತೆ ಆಕರ್ಷಕವಾಗಿವೆ ಎಂದರು. ಇಲ್ಲಿಯ ೨೧೬ ಕವನಗಳಿಗೆ ೨೧೬ ಚಿತ್ರಗಳಿವೆ. ಅವು ಫೋಟೋಗಳು. ಆ ಫೋಟೋಗಳನ್ನು ಅವರೇ ಕಂಪ್ಯೂಟರ್ ಮೂಲಕ ಅತ್ತಿತ್ತ ತಿರುಚಿ ಕವನಕ್ಕೆ ಹೊಂದುವಂತೆ ಬದಲಾಯಿಸಿ ನೀಡಿದ್ದಾರೆ. ಅವುಗಳನ್ನು ನೋಡಿದರೆ ಶ್ರೀಯತರು ಫೋಟೋಗಳನ್ನು ನೋಡಿ ಕವನಗಳನ್ನು ಬರೆದರೋ ಎನ್ನುವಷ್ಟು ಆಶ್ಚರ್ಯವಾಗುತ್ತದೆ. ಇಲ್ಲಿಯ ಫೋಟೋಗಳು ಅತ್ಯಂತ ಪರಿಣಾಮಕಾರಿಯಾಗಿವೆ. ಇಲ್ಲಿಯ ಕವನಗಳಲ್ಲಿ ವೈವಿಧ್ಯತೆಯಿದೆ. ಕಾಮ, ಪ್ರೇಮ, ಸಂಸಾರ, ಭ್ರಷ್ಟಾಚಾರದ ವಿಷಯಗಳಿಂದ ಹಿಡಿದು ವಿಜ್ಞಾನ, ತಂತ್ರಜ್ಞಾನ, ಜಾಗತೀಕರಣ, ಪರಿಸರ, ಕಂಪ್ಯೂಟರ್‌ನಂತಹ ಅತ್ಯಾಧುನಿಕ ವಿಷಯಗಳ ಮೇಲೆ ಹನಿಗವನಗಳನ್ನು ರಚಿಸಿದ್ದಾರೆ. ಇವು ಕನ್ನಡಕ್ಕೆ ಹೊಸತು. ನಗಿಸುವ ಕವನಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ, ತಂತಾನೆ ಓದಿಸಿಕೊಂಡು ಹೋಗುತ್ತವೆ, ವೈವಿಧ್ಯಮಯವಾದ ಪ್ರಪಂಚ ಜ್ಞಾನವನ್ನು ನೀಡುತ್ತವೆ, ಅರಿವಿನ ಕಣ್ಣು ತೆರೆಸುತ್ತವೆ ಎಂದರು.
          ಪ್ರಾಂಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಮಾತನಾಡುತ್ತ ಇಲ್ಲಿಯ ಹನಿಗವನಗಳು ಆಯುರ್ವೇದಿಕ್ ಅಲ್ಲ ಹೋಮಿಯೋಪತಿಕ್ ಕೂಡ ಅಲ್ಲ. ಅವು ಸಮಾಜದ ಅಂಕುಡೊಂಕುಗಳಿಗೆ ಮಾಡಿದ ಸರ್ಜರಿ. ಕಂಪ್ಯೂಟರ್, ಇಂಟರ್‌ನೆಟ್, ಕಾರ್ ಡ್ರೈವಿಂಗ್, ಕಾನೂನು, ವ್ಯಕ್ತಿತ್ವ ವಿಕಸನದಂತಹ ವಿಷಯಗಳನ್ನು ಆಕರ್ಷಕವಾಗಿ ಬರೆದ ಶ್ರೀಯುತರು ಇದೀಗ ಹನಿಗವನಗಳ ಕೋಟೆಗೆ ಲಗ್ಗೆಯಿಟ್ಟಿದ್ದಾರೆ ಎಂದರು.
          ಡಾ. ಪದ್ಮನಾಭ ಭಟ್‌ರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ ಗೋಪಾಲಕೃಷ್ಣ ಸಾಮಗರು ವಂದಿಸಿದರು. ಅಶ್ವಿನ್ ಲಾರೆನ್ಸ್ ಕರ್ನೇಲಿಯೋ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ವಿಠಲ ನಾಯಕ್‌ರವರು ಉಪಸ್ಥಿತರಿದ್ದರು.
ಎನ್.ಭವಾನಿಶಂಕರ್‌ರವರ ನಗು ಮತ್ತು ಆರೋಗ್ಯ-ಕೃತಿ ಬಿಡುಗಡೆ

          ಶಿರ್ವದ ಸಂತ ಮೇರಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಎನ್. ಭವಾನಿಶಂಕರ್‌ರವರ ನಗು ಮತ್ತು ಆರೋಗ್ಯ ಎಂಬ ಕೃತಿಯನ್ನು ಸಾಹಿತಿಗಳಾದ ಬಿ. ಸೀತಾರಾಮ ಭಟ್‌ರವರು ಬಿಡುಗಡೆ ಮಾಡಿದರು.
          ಕೃತಿಯನ್ನು ಬಿಡುಗಡೆ ಮಾಡಿದ ಅವರು ಈ ಕೃತಿಯು ಹಾಸ್ಯದ ಎಲ್ಲಾ ಆಯಾಮಗಳನ್ನು ತೆರೆದಿಡುವ ಉತ್ತಮವಾದ ಪ್ರಯತ್ನವನ್ನು ಮಾಡಿದೆ ಎಂದರು. ಹಾಸ್ಯ ನಮ್ಮ ಆರೋಗ್ಯವನ್ನು ರಕ್ಷಿಸುತ್ತದೆ ಮಾತ್ರವಲ್ಲ ಅದನ್ನು ಉತ್ತಮಗೊಳಿಸುತ್ತದೆ ಎಂಬುದನ್ನು ಹಾಸ್ಯವು ದೇಹಕ್ಕೆ ಔಷಧಿ ಹೇಗೆ?, ಹಾಸ್ಯವು ಮನಸ್ಸಿಗೆ ಔಷಧಿ ಹೇಗೆ? ಎಂಬ ಎರಡು ಅಧ್ಯಾಯಗಳ ಮೂಲಕ ಅತ್ಯಂತ ಚೆನ್ನಾಗಿ ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಹಾಸ್ಯವು ದೇಹದಲ್ಲಿ ಉಂಟು ಮಾಡುವ ರಾಸಾಯನಿಕ ಬದಲಾವಣೆಗಳನ್ನು ವೈಜ್ಞಾನಿಕವಾಗಿ ನಿರೂಪಿಸಿದ್ದಾರೆ. ಹಾಸ್ಯದ ಮನೋಭಾವವನ್ನು ಹೊಂದಲು ವ್ಯಕ್ತಿಯು ತನ್ನನ್ನು ಹೇಗೆ ತಯಾರಿ ಮಾಡಿಕೊಳ್ಳಬೇಕು, ಹಾಸ್ಯ ಪ್ರಸಂಗವನ್ನು ಸೃಷ್ಟಿಸುವುದು ಹೇಗೆ, ಅದನ್ನು ಹೇಳುವುದು ಹೇಗೆ? ಎಂಬ ವಿಷಯಗಳನ್ನು ಉದಾಹರಣೆಗಳೊಂದಿಗೆ ಅತ್ಯಂತ ಚೆನ್ನಾಗಿ ವಿವರಿಸಿದ್ದಾರೆ. ಇದರ ಜೊತೆಗೆ ತನ್ನ ವೈಯಕ್ತಿಕ ಜೀವನದಲ್ಲಿ ಹಾಸ್ಯ ಪ್ರಯೋಗಿಸುವುದನ್ನು ಹೇಗೆ ಕಲಿತೆ ಎಂದು ಹೇಳುತ್ತಾ ತನ್ನ ಬದುಕಿನ ಅನೇಕ ಹಾಸ್ಯ ಪ್ರಸಂಗಗಳನ್ನು ಉದಾಹರಿಸುವುದರ ಮೂಲಕ ಕೃತಿಗೆ ಪ್ರಯೋಗಶೀಲತೆಯ ಹೊಸ ಮುಖವೊಂದನ್ನು ನೀಡಿದ್ದಾರೆ. ಈ ಪುಸ್ತಕದ ಎರಡನೆಯ ಭಾಗದಲ್ಲಿ ಘಟನೆಗಳನ್ನು ಆಕರ್ಷಕವಾಗಿ ನಿರೂಪಿಸುವುದು ಹೇಗೆ, ಅದರ ತಂತ್ರಗಳೇನು ಎಂಬುದನ್ನು ಪರಿಚಯಿಸುತ್ತ ಅನೇಕ ಹನಿಗವನಗಳು ಮತ್ತು ಜೋಕುಗಳನ್ನೂ ಉದಾಹರಿಸಿದ್ದಾರೆ. ಒಟ್ಟಿನಲ್ಲಿ ಈ ಕೃತಿಯು ಹಾಸ್ಯದ ಕಿರು ವಿಶ್ವಕೋಶವಾಗಿದ್ದು ಅದರ ಜೊತೆಗೆ ಮಾತನಾಡುವಾಗ ಬೇಕಾಗುವ ಸಂವಹನದ ತಂತ್ರಗಳನ್ನು ಪರಿಚಯಿಸಿದ್ದಾರೆ. 
          ಕಾಲೇಜಿನ ಪ್ರಾಂಶುಪಾಲರಾದ ಡಾ. ಕ್ಲಾರೆನ್ಸ್ ಮಿರಾಂಡರವರು ಇವತ್ತಿನ ಹಣವೇ ಪ್ರಧಾನವಾದ ಗಡಿಬಿಡಿಯ ಯಾಂತ್ರಿಕ ಜೀವನದಲ್ಲಿ ಹಾಸ್ಯವು ಕಾಣೆಯಾಗಿದ್ದು ಜನರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಮಾನಸಿಕ ಒತ್ತಡ ನಿವಾರಣೆಯ ನಿಟ್ಟಿನಲ್ಲಿ ಈ ಪುಸ್ತಕವು ಅತ್ಯಂತ ಪ್ರಾಯೋಗಿಕವಾದ ಪರಿಹಾರಗಳನ್ನು ನೀಡಿದೆ ಎಂದರು. ಓರ್ವ ಕನ್ನಡ ಪ್ರಾಧ್ಯಾಪಕರಾದ ಅವರು ಕಂಪ್ಯೂಟರ್, ಇಂಟರ್‌ನೆಟ್, ಕಾರ್ ಡ್ರೈವಿಂಗ್, ಕಾನೂನು, ಮನಶ್ಯಾಸ್ತ್ರಗಳಿಗೆ ಸಂಬಂಧಿಸಿದ ಕೃತಿಗಳನ್ನು ಅತ್ಯಂತ ಸರಳವಾದ ಕಸ್ತೂರಿ ಪರಿಮಳದ ಕನ್ನಡದಲ್ಲಿ ಬರೆಯುತ್ತಿರುವುದಕ್ಕಾಗಿ ಅಭಿನಂದಿಸಿದರು.      
          ಡಾ. ಪದ್ಮನಾಭ ಭಟ್‌ರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ವಿಠಲ ನಾಯಕ್‌ರವರು ವಂದಿಸಿದರು. ಶ್ರೀ ಲತಾ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ಗೀತಾರವರು ಉಪಸ್ಥಿತರಿದ್ದರು.